ಕುಶಾಲನಗರ ಕನ್ನಿಕಾಪರಮೇಶ್ವರಿ ದೇವಸ್ಥಾನದ 10ನೇ ವರ್ಷದ ಪ್ರತಿಷ್ಠಾ ವರ್ಧಂತಿ

KannadaprabhaNewsNetwork | Published : Feb 24, 2024 2:34 AM

ಸಾರಾಂಶ

ಕುಶಾಲನಗರದ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದ 10ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ದೇವಿಗೆ ಸ್ವರ್ಣ ಮುಖ ಕವಚ ಸಮರ್ಪಣಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ದೇವಸ್ಥಾನದಲ್ಲಿ ಚಂಡಿಕಾ ಹೋಮ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕಾವೇರಿ ಮೂಲ ಸುಭೀಕ್ಷವಾಗಿದ್ದಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳೂ ಸುಭೀಕ್ಷವಾಗಿರುತ್ತವೆ ಎಂದು ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದ 10ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ದೇವಿಗೆ ಸ್ವರ್ಣ ಮುಖ ಕವಚ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನಲ್ಲಿ ಹುಟ್ಟಿ ದಕ್ಷಿಣ ಭಾರತದ ಕೋಟ್ಯಂತರ ಜನ ಜಾನುವಾರುಗಳ ಬಾಯಾರಿಕೆ ನೀಗಿಸುವ, ಲಕ್ಷಾಂತರ ಎಕರೆಯಲ್ಲಿ ಬೆಳೆ ಬೆಳೆಯಲು ಕಾವೇರಿ ಮಾತೆಯ ಕೊಡುಗೆ ಪ್ರಮುಖವಾಗಿದೆ ಎಂದರು.

ಅಂತಹ ಶ್ರೇಷ್ಠ ಸ್ಥಳದಲ್ಲಿ ವಾಸವಿ ಮಾತೆಯ ವಿಗ್ರಹಕ್ಕೆ ಸ್ವರ್ಣದ ಮುಖವಾಡ ಅರ್ಪಿಸಿದ್ದು ನಮ್ಮೆಲ್ಲರ ಭಾಗ್ಯ ಎಂದರಲ್ಲದೆ, ವಿಶ್ವದಲ್ಲಿ ಭಾರತದ ಘನತೆ ಹೆಚ್ಚಾಗುತ್ತಿರುವ ಹಾಗೆಯೇ ದೇಶದ ಹಿಂದೂ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆಯೂ ವಿಶ್ವ ತಿಳಿಯಲು ದೇಶದ ಧಾರ್ಮಿಕ ವ್ಯವಸ್ಥೆ ಪ್ರೇರೇಪಣೆ ಆಗುತ್ತಿದೆ ಎಂದರು.

ರಾಜ್ಯದಲ್ಲಿ ಆರ್ಯವೈಶ್ಯ ಸಮುದಾಯದ ಜನಸಂಖ್ಯೆ ಹುಟ್ಟು 4.5 ಲಕ್ಷ ಪ್ರಮಾಣವಾಗಿದ್ದು, ರಾಜ್ಯದಲ್ಲಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ 300 ಸಂಖ್ಯೆ ಇದ್ದು, 30-35 ದೇವಸ್ಥಾನ ನಿರ್ಮಾಣ ಆಗುವ ಹಂತದಲ್ಲಿ ಇವೆ. ಸಮಾಜದಿಂದ ಧರ್ಮ ಜಾಗೃತಿಗಾಗಿ 25 ಕೋಟಿ ರು.ಗೂ ಹೆಚ್ಚು ಖರ್ಚ್ಚು ಮಾಡುತ್ತಿರುವುದಾಗಿ ಮಾಹಿತಿ ಒದಗಿಸಿದರು.

ಜನಾಂಗದವರು ಧರ್ಮ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅಪಾರವಾದ ಕೊಡುಗೆ ನೀಡುತ್ತಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ ಎಂದರು.

10ನೇ ವರ್ಷದ ಪ್ರತಿಷ್ಠಾ ವರ್ಧಂತಿ ಅಂಗವಾಗಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ನೆರವೇರಿಸಲಾಯಿತು.

ಕುಶಾಲನಗರ ಆರ್ಯವೈಶ್ಯ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ಮಾತನಾಡಿ, ಸಮಾಜದ ದಾನಿಗಳ ಸಹಕಾರದಿಂದ ದೇವಿಗೆ ಮುಖ ಸ್ವರ್ಣ ಕವಚ ಅರ್ಪಿಸಲಾಗಿದೆ. ದೇವರ ಇಚ್ಛೆಯಂತೆ ಎಲ್ಲ ನಡೆಯುವುದರಿಂದ ಮಾತೆಯ ಆಜ್ಞೆಯಂತೆ ನಡೆಯೋಣ ಎಂದು ಕರೆ ನೀಡಿದರು.

ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್ ಭಟ್ ನೇತೃತ್ವದಲ್ಲಿ ಪ್ರಮೋದ್ ಭಟ್, ರಾಘವೇಂದ್ರ ಭಟ್ ಇತರರು ಪೂಜಾ ಕೈಂಕರ್ಯ ನಡೆಸಿದರು.

ಮಹಾಸಭಾದ ಕೊಡಗು ಜಿಲ್ಲಾ ನಿರ್ದೇಶಕ ಬಿ.ಆರ್.ನಾಗೇಂದ್ರ ಪ್ರಸಾದ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ಯುವತಿಯರ ಸಂಘದ ಅಧ್ಯಕ್ಷೆ ಕವಿತಾ, ಯುವಜನ ಸಂಘದ ಅಧ್ಯಕ್ಷ ಪ್ರವೀಣ್, ಸಮಾಜದ ಹಿರಿಯರಾದ ವಿ.ಎನ್.ಪ್ರಭಾಕರ್, ಕೆ.ಜೆ.ನಾಗೇಂದ್ರ ಗುಪ್ತ, ವಿ.ಪಿ.ರಾಜಗೋಪಾಲ್ ಮತ್ತು ಆರ್ಯವೈಶ್ಯ ಕುಲಭಾಂಧವರು ಹಾಜರಿದ್ದರು.

Share this article