ಕೀರ್ತನಾ
ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರದ ಕೆಎಸ್ಆರ್‌ಟಿಸಿ ಬಸ್ ಘಟಕ ನಿರ್ಮಾಣ ಪೂರ್ವಸಿದ್ಧತಾ ಕಾಮಗಾರಿ ಆರಂಭಗೊಂಡಿದೆ.
ಕುಶಾಲನಗರ -ಮಡಿಕೇರಿ ರಸ್ತೆಯ ಬಸವನಹಳ್ಳಿ ಬಳಿ ನಿರ್ಮಾಣಗೊಳ್ಳುತ್ತಿರುವ ಸುಮಾರು 7.5 ಕೋಟಿ ರು. ವೆಚ್ಚದ ಕಾಮಗಾರಿಗೆ ಇತ್ತೀಚೆಗೆ ಮಡಿಕೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು.ಕುಶಾಲನಗರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಬಸವನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಾಣ ಆಗಲಿದೆ. ಈ ಹಿನ್ನಲೆಯಲ್ಲಿ ಸಂಪೂರ್ಣ ಕಾಡು ಮತ್ತು ಪೊದೆಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.
ಈ ಪ್ರದೇಶದಲ್ಲಿ ಬೆಳೆದು ನಿಂತಿರುವ ಮರಗಳನ್ನು ತೆರವುಗೊಳಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳ ಮನವಿ ಮೇರೆಗೆ ಈಗಾಗಲೇ ಅರಣ್ಯ ಇಲಾಖೆ ಎಲ್ಲಾ ಸಿದ್ಧತೆ ನಡೆಸಿದೆ ಎಂದು ಕುಶಾಲನಗರ ಅರಣ್ಯ ವಲಯ ಅಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ.
ಘಟಕ ನಿರ್ಮಾಣ ಆಗಬೇಕಿರುವ ಇಡೀ ಪ್ರದೇಶವನ್ನು ಸಮತಟ್ಟುಗೊಳಿಸಲಾಗುತ್ತಿದೆ.
ಅಂದಾಜು ರು. 7.5 ಕೋಟಿ ವೆಚ್ಚದ ಕಾಮಗಾರಿ ಮೈಸೂರು ಗುತ್ತಿಗೆದಾರರಿಗೆ ಟೆಂಡರ್ ಆಗಿದ್ದು, ನಿರ್ದಿಷ್ಟ ಅವಧಿ ಒಳಗೆ ಆಧುನಿಕ ವಿನ್ಯಾಸದೊಂದಿಗೆ ಕಾಮಗಾರಿ ಮುಗಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಶೇಷವಾಗಿ ಬಸ್ ಡಿಪೋದಲ್ಲಿ ವಿದ್ಯುತ್ ಚಾಲಿತ ಬಸ್ ಗಳಿಗೆ ಅಗತ್ಯವಿರುವ ಪವರ್ ಬ್ಯಾಂಕ್ ಕೂಡ ಸ್ಥಾಪನೆಗೊಳಲಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.
-------ಕಳೆದ ಹಲವು ವರ್ಷಗಳಿಂದ ಬಸ್ ಡಿಪೋ ಕಾಮಗಾರಿ ಪ್ರಾರಂಭಗೊಳ್ಳುವಲ್ಲಿ ವಿಳಂಬವಾಗಿದ್ದು ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು.