ಹೆಚ್ಚು ಮಳೆಯಾದರೆ ಕುಶಾಲನಗರ ತಗ್ಗು ಪ್ರದೇಶಕ್ಕೆ ಆತಂಕ

KannadaprabhaNewsNetwork |  
Published : May 14, 2024, 01:02 AM IST
ಚಿತ್ರ : 13ಎಂಡಿಕೆ1 : ಕುಶಾಲನಗರದ ಬಡಾವಣೆಯಲ್ಲಿ ಪ್ರವಾಹ(ಫೈಲ್ ಫೋಟೋ) | Kannada Prabha

ಸಾರಾಂಶ

ಮಳೆಗಾಲ ಎಂದರೆ ಸಾಕು ತಗ್ಗು ಪ್ರದೇಶದ ಜನರಿಗೆ ಹಾರಂಗಿ ಭಯ ಕಾಡುತ್ತದೆ. ಹೊರ ಹರಿವು ಆತಂಕ ಸೃಷ್ಟಿಸುತ್ತದೆ.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರಿ ಮಳೆಯಾದ ಸಂದರ್ಭ ಹಾರಂಗಿ ಜಲಾಶಯ ಮೈದುಂಬುತ್ತದೆ. ಇದರಿಂದ ಮಳೆಗಾಲ ಎಂದರೆ ಸಾಕು ಕುಶಾಲನಗರ ಪಟ್ಟಣದ ತಗ್ಗು ಪ್ರದೇಶದ ಜನರಿಗೆ ಹಾರಂಗಿ ಭಯ ಕಾಡುತ್ತದೆ.

ಮಳೆಗಾಲದಲ್ಲಿ ಹಾರಂಗಿ ಜಲಾಶಯದ ಹೊರಹರಿವು ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದು, ಕಾವೇರಿ‌ ನದಿ ತಟದ ನಿವಾಸಿಗಳನ್ನು ಮಳೆ ಕಂಗೆಡಿಸುತ್ತದೆ. ಕುಶಾಲನಗರ ಪ್ರದೇಶದ ತಗ್ಗು ಪ್ರದೇಶಗಳಾದ ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆಗಳಿಗೆ ನೀರು ಆವರಿಸಿ ಪ್ರವಾಹ ಉಂಟಾಗುವುದು ಸಾಮಾನ್ಯ.

2018ರಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಕುಶಾಲನಗರ ಬಹುತೇಕ ಬಡಾವಣೆಗಳು ಪ್ರವಾಹಕ್ಕೆ ಸಿಲುಕಿದ್ದು, ಜನರ ವಾಸಕ್ಕೆ ಯೋಗ್ಯವಲ್ಲದ ಪರಿಸ್ಥಿತಿ ಉಂಟಾಗಿತ್ತು.

ಬಡಾವಣೆಗಳಲ್ಲಿ ಪ್ರವಾಹ: ಮಳೆ ಹೆಚ್ಚಾದಂತೆ ಕುಶಾಲನಗರ ಪಟ್ಟಣದಲ್ಲಿ ಪ್ರಮುಖವಾಗಿ ಸಾಯಿ ಬಡಾವಣೆ, ಕುವೆಂಪು ನಗರದಲ್ಲಿ ಪ್ರವಾಹ ಉಂಟಾಗುತ್ತದೆ. ಅಲ್ಲದೆ ನದಿ ತಟದಲ್ಲಿರುವ ಸುಮಾರು 12 ಬಡಾವಣೆಗಳು ಕೂಡ ತೊಂದರೆ ಅನುಭವಿಸುವಂತಾಗುತ್ತದೆ. ಈ ಹಿಂದೆ ಕಾವೇರಿ ನದಿ ವ್ಯಾಪ್ತಿಯಲ್ಲಿ ಹೂಳೆತ್ತುವ ಕಾರ್ಯ ಮಾಡಲಾಗಿದೆ. ಇದರಿಂದ ಇತ್ತೀಚಿನ ವರ್ಷಗಳಲ್ಲಿ ಪ್ರವಾಹ ಕಡಿಮೆಯಾಗಿದೆ ಎನ್ನಲಾಗುತ್ತಿದೆ.

ತಡೆಗೋಡೆ ಕಾಮಗಾರಿ: ಭಾರಿ ಮಳೆಯಾದ ಸಂದರ್ಭ ಪ್ರವಾಹ ಉಂಟಾಗುವ ಕುವೆಂಪು ಬಡಾವಣೆಯಲ್ಲಿ ಪ್ರವಾಹ ತಗ್ಗಿಸುವ ನಿಟ್ಟಿನಲ್ಲಿ ಕಾವೇರಿ ನದಿ ತಟದ ಸರ್ಕಾರಿ ಜಾಗದಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಶೇ.50ರಷ್ಟು ಪೂರ್ಣಗೊಂಡಿದೆ. ಹಾರಂಗಿ ನೀರಾವರಿ ನಿಗಮದಿಂದ 4 ಕೋಟಿ ರುಪಾಯಿ ವೆಚ್ಚದ ಕಾಮಗಾರಿಯಾಗಿದೆ. 2018ರಲ್ಲಿ ಪ್ರವಾಹ ಬಂದ ಎತ್ತರಕ್ಕೆ ತಡೆಗೋಡೆ ಕಾಮಗಾರಿ ನಡೆಸಲಾಗುತ್ತಿದೆ. ಈ ಕಾಮಗಾರಿ ನಡೆದರೆ, ಪ್ರವಾಹ ಸಮಸ್ಯೆ ತಗ್ಗಲಿದೆ ಎಂದು ಕುವೆಂಪು ಬಡಾವಣೆ ನಿವಾಸಿಗಳು ಹೇಳುತ್ತಾರೆ. ಉಳಿದಂತೆ ಸಾಯಿ ಬಡಾವಣೆ, ಗುಮ್ಮನಕೊಲ್ಲಿಯಲ್ಲೂ ಕೂಡ ತಡೆಗೋಡೆ ಕಾಮಗಾರಿ ಆಗಲಿದೆ.

ವೈಜ್ಞಾನಿಕ ನೀರಿನ ಹರಿವು: 2018ರಲ್ಲಿ ಭಾರಿ ಮಳೆಯಾಗಿ ಹಾರಂಗಿ ಜಲಾಶಯ ತುಂಬಿತ್ತು. ಜಲಾಶಯದಿಂದ ಸಕಾಲಕ್ಕೆ ನೀರು ಹೊರಗೆ ಹರಿಸದೆ ಅವೈಜ್ಞಾನಿಕ ಮಾದರಿ ಅನುಸರಿಸಿದ ಹಿನ್ನೆಲೆಯಲ್ಲಿ ಕುಶಾಲನಗರದ ಹಲವು ಬಡಾವಣೆಗಳು ಮುಳುಗುವಂತಹ ಪರಿಸ್ಥಿತಿಯಾಯಿತು. ಇತ್ತೀಚಿನ ವರ್ಷಗಳಲ್ಲಿ ಹಾರಂಗಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ನೀರನ್ನು ಕಾಲ ಕಾಲಕ್ಕೆ ಹರಿಸಲಾಗುತ್ತಿದೆ. ಇದರಿಂದ ಪ್ರವಾಹ ಪ್ರಮಾಣ ತಪ್ಪುತ್ತಿದೆ ಎನ್ನಲಾಗುತ್ತಿದೆ.

ತಾವರೆಕೆರೆಯಲ್ಲೂ ಪ್ರವಾಹ!: ಮಳೆಗಾಲದಲ್ಲಿ ಕುಶಾಲನಗರದ ತಾವರೆಕೆರೆ ತುಂಬುತ್ತದೆ. ತಾವರೆಕೆರೆ ಸುತ್ತಮುತ್ತಲ ಪ್ರದೇಶ ಒತ್ತುವರಿಯಾಗಿದೆ. ಈ ಪರಿಣಾಮದಿಂದಾಗಿಯೇ ಮಳೆಗಾಲದಲ್ಲಿ ಕೆರೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ನೀರು ತುಂಬಿ ಸಮೀಪ ಜಾಗದಲ್ಲೂ ಪ್ರವಾಹ ಉಂಟಾಗುತ್ತದೆ. ಅಲ್ಲದೆ ಕುಶಾಲನಗರ- ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಕೂಡ ನೀರಿನಿಂದ ಆವೃತ್ತವಾಗಿ ಸಂಚಾರಕ್ಕೆ ತೊಡಕಾಗುತ್ತದೆ.

2018ರಿಂದ 2020ರ ವರೆಗೆ ನಮ್ಮ ಬಡಾವಣೆಯಲ್ಲಿ ಸತತವಾಗಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದೆ. 150 ಮನೆಗಳು ಪ್ರವಾಹಕ್ಕೆ ಒಳಗಾಗಿತ್ತು. ಪ್ರವಾಹ ಆಗುತ್ತಿರುವ ಹಿನ್ನೆಲೆಯಲ್ಲಿ ನದಿ ತಟದಲ್ಲಿ ಇದೀಗ 4 ಲಕ್ಷ ರು. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಆಗುತ್ತಿದೆ. ಶೇ.50ರಷ್ಟು ಕೆಲಸ ಆಗಿದ್ದು, ಪೂರ್ಣ ಆಗಿಲ್ಲ. ಕೆಲಸ ಬೇಗ ಆದರೆ ಈ ಬಾರಿ ಪ್ರವಾಹದಿಂದ ಸಮಸ್ಯೆ ಆಗುವುದಿಲ್ಲ ಎಂದು ಕುಶಾಲನಗರ ಕುವೆಂಪು ಬಡಾವಣೆ ನಿವಾಸಿ ಎಂ.ಕೆ. ದಯಾನಂದ್ ಹೇಳಿದರು.

ಮಳೆಗಾಲ ಆರಂಭ ಹಿನ್ನೆಲೆಯಲ್ಲಿ ನಾವು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ನೀರು ಸರಾಗವಾಗಿ ಹರಿದು ಹೋಗಲು ಈಗಾಗಲೇ ನಾಲೆಯಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದ್ದೇವೆ. ಅಲ್ಲದೆ ಚರಂಡಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ. ಮಳೆಗಾಲ ಸಂಬಂಧ ಜಿಲ್ಲಾಧಿಕಾರಿಗಳು ಸಭೆ ನಡೆಸಲಿದ್ದಾರೆ. ಅವರ ಸೂಚನೆಯಂತೆ ಕೆಲಸ ಮಾಡಲಾಗುವುದು ಎಂದು ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ