ಕನ್ನಡಪ್ರಭ ವಾರ್ತೆ ಕುಶಾಲನಗರ
ಸೋಮವಾರಪೇಟೆಯಿಂದ ಕುಶಾಲನಗರದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದ ಬಳಿ ಗಣ್ಯರು ತಾಯಿ ನಾಡ ದೇವಿ ಭುವನೇಶ್ವರಿಗೆ ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಸೇರಿದಂತೆ ಪುಷ್ಪಾರ್ಚನೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದರು.
ಬೈಚನಹಳ್ಳಿ ಬಳಿಯಿಂದ ಪಟ್ಟಣದ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಸಂಘ ಸಂಸ್ಥೆಗಳ ಪ್ರಮುಖರು ಅಧಿಕಾರಿಗಳು ಸಿಬ್ಬಂದಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ತೆರಳಿ ಕನ್ನಡಾಂಬೆಗೆ ಜಯಘೋಷ ಹಾಕಿದರು.ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಮಾತನಾಡಿ, ಕನ್ನಡ ನಾಡು ನುಡಿ ಭಾಷೆಗೆ ಇರುವ ಇತಿಹಾಸವನ್ನು ಯುವ ಪೀಳಿಗೆಗೆ ನೆನಪಿಸಿಕೊಳ್ಳಲು ಇದೊಂದು ಅವಕಾಶವಾಗಿದೆ ಎಂದು ಹೇಳಿದರು.
50 ವರ್ಷ ಪೂರ್ಣಗೊಂಡ ಹಿನ್ನೆಲೆ ಸುವರ್ಣ ಸಂಭ್ರಮ ರಥಯಾತ್ರೆಯನ್ನು ರಾಜದಾದ್ಯಂತ ಹಮ್ಮಿಕೊಳ್ಳಲಾಗಿದ್ದು ಇದೀಗ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ರಥ ತೆರಳುತ್ತಿದೆ. ಕನ್ನಡ ನಾಡು ನುಡಿ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.ಕುಶಾಲನಗರದಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅದ್ಧೂರಿಯಾಗಿ ಬರಮಾಡಿಕೊಂಡು ಮೆರವಣಿಗೆ ಮೂಲಕ ತೆರಳಿರುವುದು ಸಂತಸದ ವಿಷಯ ಎಂದರು.
ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆ ಪ್ರಮುಖರು ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೆರವಣಿಗೆ ಮೂಲಕ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೈಚನಹಳ್ಳಿಯಿಂದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ವೃತ್ತ ಮೂಲಕ ಸೋಮೇಶ್ವರ ದೇವಸ್ಥಾನ ತನಕ ರಥದೊಂದಿಗೆ ತೆರಳಿದರು.ಕುಶಾಲನಗರ ಸುತ್ತಮುತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಥವನ್ನು ನಾಗರಿಕರು ಬರಮಾಡಿಕೊಂಡು ಪುಷ್ಪಾರ್ಚನೆ ಮಾಡಿದರು.
ಸುವರ್ಣ ರಥ ಬುಧವಾರ ಕುಶಾಲನಗರದಲ್ಲಿ ತಂಗಿದ್ದು ಗುರುವಾರ ಬೆಳಗ್ಗೆ ಕುಶಾಲನಗರದಿಂದ ಕೂಡಿಗೆ ಮೂಲಕ ಸಾಗಿ ಹಾಸನದತ್ತ ಸಂಚರಿಸಲಿದೆ.