ಕುಶಾಲನಗರ: 13ರಂದು 6ನೇ ವರ್ಷದ ಅದ್ಧೂರಿ ಹನುಮ ಜಯಂತಿ

KannadaprabhaNewsNetwork |  
Published : Dec 11, 2024, 12:47 AM IST
6ನೇ ವರ್ಷದ ಅದ್ದೂರಿ ಹನುಮ ಜಯಂತಿ ಮಹೋತ್ಸವ | Kannada Prabha

ಸಾರಾಂಶ

ಕುಶಾಲನಗರ ರಥಬೀದಿಯಲ್ಲಿರುವ ಆಂಜನೇಯ ದೇವಾಲಯ ‌ಸಮಿತಿಯಿಂದ ಕಳೆದ 38 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಹನುಮ ಜಯಂತಿ 15 ವರ್ಷಗಳಿಂದ ತನ್ನ ಸ್ವರೂಪ ವಿಸ್ತರಿಸಿಕೊಂಡಿದೆ. ಕುಶಾಲನಗರ ಸುತ್ತಮುತ್ತಲಿನ ಗ್ರಾಮಗಳನ್ನು ಒಳಗೊಂಡಂತೆ ಹನುಮ ಜಯಂತಿ ಆಚರಣೆಗೆ ಮುಂದಾದ ನಂತರ ಮಡಿಕೇರಿ, ಗೋಣಿಕೊಪ್ಪಲಿನಲ್ಲಿ ನಡೆಯುವ ದಸರಾ ರೀತಿಯ ವೈಭವ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದಲ್ಲಿ 13 ರಂದು 6ನೇ ವರ್ಷದ ಅದ್ದೂರಿ ಹನುಮ ಜಯಂತಿ ಮಹೋತ್ಸವ ನಡೆಯಲಿದ್ದು ಈ ಸಂಬಂಧ ಕುಶಾಲನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವ ಮಂಟಪಗಳ ಅದ್ದೂರಿ ಶೋಭಾಯಾತ್ರೆ ನಡೆಯಲಿದೆ ಎಂದು ಹನುಮ ಜಯಂತಿ ದಶ ಮಂಟಪಗಳ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥಬೀದಿಯಲ್ಲಿರುವ ಆಂಜನೇಯ ದೇವಾಲಯ ‌ಸಮಿತಿಯಿಂದ ಕಳೆದ 38 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಹನುಮ ಜಯಂತಿ 15 ವರ್ಷಗಳಿಂದ ತನ್ನ ಸ್ವರೂಪ ವಿಸ್ತರಿಸಿಕೊಂಡಿದೆ. ಕುಶಾಲನಗರ ಸುತ್ತಮುತ್ತಲಿನ ಗ್ರಾಮಗಳನ್ನು ಒಳಗೊಂಡಂತೆ ಹನುಮ ಜಯಂತಿ ಆಚರಣೆಗೆ ಮುಂದಾದ ನಂತರ ಮಡಿಕೇರಿ, ಗೋಣಿಕೊಪ್ಪಲಿನಲ್ಲಿ ನಡೆಯುವ ದಸರಾ ರೀತಿಯ ವೈಭವ ಪಡೆದುಕೊಂಡಿದೆ ಎಂದರು.

ಆಂಜನೇಯ ದೇವಾಲಯದ ಮೂಲ ಮಂಟಪದೊಂದಿಗೆ ವಿವಿಧ ಗ್ರಾಮಗಳಿಂದ ಪ್ರತ್ಯೇಕ ಸಮಿತಿಗಳ ಮಂಟಪಗಳು ಕೂಡ ಕಾರ್ಯಕ್ರಮದಲ್ಲಿ ತಮ್ಮ ಛಾಪು ಮೂಡಿಸಲು ಆರಂಭಿಸಿವೆ.

ಕುಶಾಲನಗರ ರಥಬೀದಿಯ ಆಂಜನೇಯ ದೇವಾಲಯದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಮಂಟಪ, ಕುಶಾಲನಗರದ ಗೋಪಾಲ್ ಸರ್ಕಲ್ ನ ಗಜಾನನ ಗೆಳೆಯರ ಬಳಗದ ಮಂಟಪ, ಮಾದಾಪಟ್ಟಣದ ರಾಮದೂತ ಜಯಂತಿ ಆಚರಣಾ ಸಮಿತಿ, ಕುಶಾಲನಗರ ಎಚ್.ಆರ್.ಪಿ.ಕಾಲನಿಯ ಅಂಜನಿಪುತ್ರ ಜಯಂತ್ಯೋತ್ಸವ ಆಚರಣಾ ಸಮಿತಿ, ಶ್ರೀರಾಮಮಂದಿರ ಮಂಟಪ, ಹಾರಂಗಿ-ಚಿಕ್ಕತ್ತೂರಿನ ವೀರ ಹನುಮ ಸೇವಾ ಸಮಿತಿ, ಮುಳ್ಳುಸೋಗೆಯ ಚಾಮುಂಡೇಶ್ವರಿ ಉತ್ಸವ ಸಮಿತಿ ಮಂಟಪ, ಕೂಡಿಗೆ ಹನುಮ ಸೇವಾ ಸಮಿತಿ, ಬೈಚನಹಳ್ಳಿಯ ಗೆಳೆಯರ ಬಳಗದ ಮಂಟಪ, ಗುಡ್ಡೆಹೊಸೂರು ವೀರಾಂಜನೇಯ ಸೇವಾ ಸಮಿತಿ ಮಂಟಪಗಳು ಪ್ರದರ್ಶನ ಗೊಳ್ಳಲಿವೆ.

ಈ ಬಾರಿಯ ಹನುಮ ಜಯಂತಿಯ ಒಟ್ಟು ಬಜೆಟ್ ಅಂದಾಜು ರು. 1.5 ಕೋಟಿಯಷ್ಟಿದೆ. ಪ್ರತಿ ಸಮಿತಿಗಳು ಕೂಡ ಆಕರ್ಷಕ ಮಂಟಪಗಳನ್ನು ಸಿದ್ದಗೊಳಿಸುತ್ತಿವೆ. ಎಲ್ಲವೂ ಗ್ರಾಮಸ್ಥರು, ದಾನಿಗಳ ಆರ್ಥಿಕ ಸಹಕಾರದಿಂದ ನಡೆಸಲಾಗುತ್ತಿದ್ದು, ಕ್ಷೇತ್ರ ಶಾಸಕರ ಮೂಲಕ ಸರ್ಕಾರದಿಂದ ಅನುದಾನಕ್ಕೆ ಕೋರಿಕೆ ಇಡಲಾಗಿದೆ ಎಂದರು.

ಈ ಬಾರಿ ಹನುಮ ಜಯಂತಿಗೆ ಅಂದಾಜು 30 ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ. ಎಲ್ಲಾ ಮಂಟಪಗಳು ತಮ್ಮ ಕಥಾವಸ್ತು ಪ್ರದರ್ಶಿಸಲು ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಸಮಯಾವಕಾಶ ನಿಗದಿಪಡಿಸಲಾಗಿದೆ.

ಮಂಟಪಗಳು ಬರುವ ಮಾರ್ಗಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.

ನಂತರ ವಿಜೇತರಿಗೆ ಬಹುಮಾನ‌ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಸಮಿತಿಯ ನಿರ್ದೇಶಕ ಬಿ.ಅಮೃತ್ ರಾಜ್ ಮಾತನಾಡಿ, ಇತಿಹಾಸ ಪ್ರಸಿದ್ದ ಗಣಪತಿ ರಥೋತ್ಸವ ನಂತರ ಕುಶಾಲನಗರದಲ್ಲಿ ಹನುಮ ಜಯಂತಿ ಆಚರಣೆ ಹೆಚ್ಚು ಗಮನ ಸೆಳೆಯುತ್ತಿದೆ. ಜಾತ್ರೋತ್ಸವದಂತೆ ಹನುಮ ಜಯಂತಿಯಲ್ಲಿ ಕೂಡ ಹೆಚ್ಚಿನ ಮಂದಿ ಪಾಲ್ಗೊಳ್ಳುವ ಮೂಲಕ ರಾಜ್ಯ‌ಮಟ್ಟದಲ್ಲಿ‌ ಖ್ಯಾತಿ ಗಳಿಸುವಂತಾಗಬೇಕಿದೆ ಎಂದರು.

ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಮನಾಥನ್, ಖಜಾಂಚಿ ಗಿರೀಶ್, ಸಹ ಕಾರ್ಯದರ್ಶಿ ಸುನಿಲ್, ನಿರ್ದೇಶಕ ಕೆ.ಎಸ್.ನಾಗೇಶ್ ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!