ಕುಶಾಲನಗರ ವಾಣಿಜ್ಯ ಸಂಕೀರ್ಣ ಶೀಘ್ರ ಲೋಕಾರ್ಪಣೆ: ಡಾ.ಮಂತರ್‌ ಗೌಡ

KannadaprabhaNewsNetwork | Published : Mar 27, 2025 1:09 AM

ಸಾರಾಂಶ

ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಎಸ್ಎಫ್‌ಸಿ ವಿಶೇಷ ಅನುದಾನ 2 ಕೋಟಿ, ಕೆಆರ್‌ಐಡಿಎಲ್ ಅನುದಾನ 1.5 ಕೋಟಿ ಮತ್ತು ಅಲ್ಪಸಂಖ್ಯಾತ ವಿಶೇಷ ಅನುದಾನ 35 ಲಕ್ಷ ರು.ನಲ್ಲಿ ಕುಶಾಲನಗರ ಪಟ್ಟಣ ಬಡಾವಣೆಗಳು ಹಾಗೂ ಗೊಂದಿ ಬಸವನಹಳ್ಳಿ ಗ್ರಾಮದ ಮುಖ್ಯರಸ್ತೆಗೆ ಭೂಮಿ ಪೂಜೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಪಟ್ಟಣದ ವಾಣಿಜ್ಯ ಸಂಕೀರ್ಣ ಈ ಸಾಲಿನ ನವೆಂಬರ್ ಒಳಗೆ ಲೋಕಾರ್ಪಣೆ ಗೊಳ್ಳಲಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.ಅವರು ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಎಸ್ಎಫ್‌ಸಿ ವಿಶೇಷ ಅನುದಾನ 2 ಕೋಟಿ, ಕೆಆರ್‌ಐಡಿಎಲ್ ಅನುದಾನ 1.5 ಕೋಟಿ ಮತ್ತು ಅಲ್ಪಸಂಖ್ಯಾತ ವಿಶೇಷ ಅನುದಾನ 35 ಲಕ್ಷ ರು.ನಲ್ಲಿ ಕುಶಾಲನಗರ ಪಟ್ಟಣ ಬಡಾವಣೆಗಳು ಹಾಗೂ ಗೊಂದಿ ಬಸವನಹಳ್ಳಿ ಗ್ರಾಮದ ಮುಖ್ಯರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಇದುವರೆಗೆ ತಮ್ಮ ಕ್ಷೇತ್ರಕ್ಕೆ ಸುಮಾರು 25 ಕೋಟಿ ರು.ಗಳ ಅನುದಾನ ದೊರೆತಿದ್ದು, ಅದರಲ್ಲಿ 19 ಕೋಟಿ ರು.ಗಳ ಕಾಮಗಾರಿ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿದೆ. ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಪಟ್ಟಣಗಳಲ್ಲಿ ಉಳಿದ ಅನುದಾನಗಳ ಮೂಲಕ ಅಗತ್ಯ ಮೂಲಸೌಲಭ್ಯಗಳ ಕಾಮಗಾರಿಗಳು ಚಾಲನೆಯಲ್ಲಿದೆ ಎಂದು ಹೇಳಿದರು.

ಗುತ್ತಿಗೆದಾರರು ಅವಧಿಯ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು, ಜನರು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಬರಬೇಕು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಅಪೂರ್ಣಗೊಂಡಿರುವ ಹಲವು ಯೋಜನೆಗಳನ್ನು ಇದೀಗ ಪೂರ್ಣಗೊಳಿಸುವ ಕೆಲಸ ನಡೆದಿದೆ ಎಂದ ಶಾಸಕರು, ಪಕ್ಷಾತೀತವಾಗಿ ನಾಡಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಕುಶಾಲನಗರ ಪಟ್ಟಣದ ತಗ್ಗು ಪ್ರದೇಶದ ಬಡಾವಣೆಗಳ ವ್ಯಾಪ್ತಿಯ ಕಾವೇರಿ ನದಿ ತಟಗಳ ಸುಮಾರು 15 ಕಿ.ಮೀ. ಉದ್ದಕ್ಕೂ ತಡಗೋಡೆ ನಿರ್ಮಾಣಕ್ಕೆ ಚಿಂತನೆ ಹರಿಸಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.ಕುಶಾಲನಗರ ಪುರಸಭೆ ವ್ಯಾಪ್ತಿಯ ಗೊಂದಿ ಬಸವನಹಳ್ಳಿ ಮುಖ್ಯರಸ್ತೆ, ಗಂಧದಕೋಟೆಯಿಂದ ಸುಬ್ರಹ್ಮಣ್ಯ ಕಾಫಿ ರಸ್ತೆ ಕಾಮಗಾರಿ, ಕುಶಾಲನಗರ ಶೈಲಜಾ ಬಡಾವಣೆ, ನೇತಾಜಿ ಬಡಾವಣೆ, ಇಂದಿರಾ ಬಡಾವಣೆ ಮತ್ತು ಉರ್ದು ಶಾಲೆ ಬಳಿ ರಸ್ತೆ ಕಾಮಗಾರಿಗಳಿಗೆ ಒಟ್ಟು 3.85 ಕೋಟಿ ರು. ವೆಚ್ಚದ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭ ಬಡಾವಣೆಗಳ ನಿವಾಸಿಗಳು ತಮ್ಮ ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ಅಹವಾಲು ತೋಡಿಕೊಂಡರು.ಇದೇ ಸಂದರ್ಭ ಪುರಸಭೆ ವ್ಯಾಪ್ತಿಯ ಆಸ್ತಿ 3ಎ ಫಲಾನುಭವಿಗಳಿಗೆ ಖಾತಾ ಪ್ರಮಾಣ ಪತ್ರ ವಿತರಣೆ ಮಾಡಿದರು. ಈ ಸಂದರ್ಭ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ವಾರ್ಡ್ ಸದಸ್ಯರಾದ ವಿ.ಎಸ್. ಆನಂದ್ ಕುಮಾರ್, ಉಪಾಧ್ಯಕ್ಷೆ ಪುಟ್ಟಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಡಿ.ಕೆ. ತಿಮ್ಮಪ್ಪ, ಸುರಯ್ಯ ಬಾನು, ಎಂ.ಎಂ. ಪ್ರಕಾಶ್, ಕಲೀಮುಲ್ಲ, ಜಗದೀಶ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್, ಎಂಜಿನಿಯರ್ ರಂಗರಾಮ್, ಆರೋಗ್ಯ ಅಧಿಕಾರಿ ಉದಯ್ ಕುಮಾರ್, ಜನಪ್ರತಿನಿಧಿಗಳು ಪಕ್ಷದ ವಿವಿಧ ಘಟಕಗಳ ಪ್ರಮುಖರು ಇದ್ದರು.

Share this article