ಕುಶಾಲನಗರ ರೋಟರಿ ಸಂಸ್ಥೆಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆ ಸುವರ್ಣ ಸಂಭ್ರಮೋತ್ಸವ ಆಚರಿಸುತ್ತಿದೆ. ಇದರ ಅಂಗವಾಗಿ ಕುಶಾಲನಗರದ ಕಾವೇರಿ ನದಿ ಸೇತುವೆ ಬಳಿ ನೂತನವಾಗಿ ನಿರ್ಮಿಸಿದ ಪ್ಲಾಸ್ಟಿಕ್ ಬಾಟಲಿ ಮಾದರಿಯ ಬಾಟಲಿಗಳ ಸಂಗ್ರಹಣಾ ತೊಟ್ಟಿಯನ್ನು ರೋಟರಿ 3181ರ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ರೋಟರಿ ಸಂಸ್ಥೆಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆ ಸುವರ್ಣ ಸಂಭ್ರಮೋತ್ಸವ ಆಚರಿಸುತ್ತಿದೆ. ಇದರ ಅಂಗವಾಗಿ ಕುಶಾಲನಗರದ ಕಾವೇರಿ ನದಿ ಸೇತುವೆ ಬಳಿ ನೂತನವಾಗಿ ನಿರ್ಮಿಸಿದ ಪ್ಲಾಸ್ಟಿಕ್ ಬಾಟಲಿ ಮಾದರಿಯ ಬಾಟಲಿಗಳ ಸಂಗ್ರಹಣಾ ತೊಟ್ಟಿಯನ್ನು ರೋಟರಿ 3181ರ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಜಿಲ್ಲೆಯ ಪ್ರವೇಶ ದ್ವಾರದಲ್ಲಿರುವ ಕಾವೇರಿ ನದಿಗೆ ಕೈ ಮುಗಿದು ಜಿಲ್ಲೆಯ ಪರಿಸರಕ್ಕೆ ಹಾನಿಯಾಗದ ಹಾಗೆ ಸ್ವಚ್ಛತೆ ಕಾಪಾಡುವಂತಾಗಬೇಕು. ನದಿ ಪ್ರಕೃತಿ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಬೇಕು ಎಂದರು.
ಸ್ವಚ್ಛತೆ ಬಗ್ಗೆ ಅರಿವು ಜಾಗೃತಿ ಮೂಡಿಸುವ ಸಂಬಂಧ ಸೇತುವೆಯ ಎರಡು ಗೋಡೆಗಳ ಮೇಲೆ ಜನಜಾಗೃತಿ ಮೂಡಿಸುವ ಬರಹಗಳನ್ನು ಅಳವಡಿಸಲಾಗಿದೆ.
ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ನದಿ-ಪರಿಸರ ಹಾಗೂ ಕೊಡಗಿನ ಸ್ವಚ್ಛತೆ ಕುರಿತು ಮಾಹಿತಿ ಒದಗಿಸುತ್ತಿರುವುದು ತೊಟ್ಟಿಯ ಉದ್ದೇಶವಾಗಿದೆ. ಇಂತಹ ಕಾರ್ಯಗಳು ಶ್ಲಾಘನೀಯ. ಕುಶಾಲನಗರ ರೋಟರಿ ಸಂಸ್ಥೆ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ, ರೋಟರಿ ಸುವರ್ಣ ಸಂಭ್ರಮೋತ್ಸವದ ಸವಿ ನೆನಪಿಗೆ ಕುಶಾಲನಗರವನ್ನು ಸ್ವಚ್ಛವಾಗಿ ರೂಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಕಂಡ ಕಂಡಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುವುದನ್ನು ತಪ್ಪಿಸಲು ಜಿಲ್ಲೆಯ ಪ್ರವೇಶ ದ್ವಾರದ ಕಾವೇರಿ ನದಿ ಸೇತುವೆ ಬಳಿ ಬಾಟಲಿ ಮಾದರಿಯ ತೊಟ್ಟಿಯನ್ನು ಅಳವಡಿಸಲಾಗಿದೆ. ಕುಶಾಲನಗರ ಪಟ್ಟಣದ ಹಲವು ಕಡೆ ಈ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರವಾಸಿಗರು ಹಾಗೂ ಸಾರ್ವಜನಿಕರು ಇದರ ಬಳಕೆ ಮೂಲಕ ಪರಿಸರವನ್ನು ಸ್ವಚ್ಛವಾಗಿಡಲು ರೋಟರಿ ಹಾಗೂ ಪುರಸಭೆಯೊಂದಿಗೆ ಕೈಜೋಡಿಸಬೇಕು. ಆ ಮೂಲಕ ಸ್ವಚ್ಛ ಕಾವೇರಿ, ಸ್ವಚ್ಛ ಕುಶಾಲನಗರ ನಿರ್ಮಾಣ ಸಾಧ್ಯ ಎಂದರು.ಸೇತುವೆ ಬಳಿಯ ಬ್ರಿಟಿಷರ ಕಾಲದ ಹಳೆ ಸೇತುವೆಯನ್ನು ರೋಟರಿ ವತಿಯಿಂದಲೇ ಅಭಿವೃದ್ಧಿಗೊಳಿಸಿ ಉದ್ಯಾನವನವಾಗಿ ರೂಪಿಸಲು ಪುರಸಭೆ ಅವಕಾಶ ನೀಡಬೇಕು ಎಂದು ಕೋರಿದರು.ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಮಾತನಾಡಿ, ಜಿಲ್ಲೆಯ ಪ್ರವೇಶ ದ್ವಾರದ ನಗರ ಕುಶಾಲನಗರದ ಸ್ವಚ್ಛತೆಗೆ ಪುರಸಭೆಯೊಂದಿಗೆ ಕೈಜೋಡಿಸಿರುವ ರೋಟರಿ ಸಂಸ್ಥೆಗೆ ಎಲ್ಲ ಅಗತ್ಯ ನೆರವು ನೀಡಲಾಗುವುದು. ಹಾಗೆಯೇ ಸಾರ್ವಜನಿಕರು ನಗರದ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಕೋರಿದರು. ಹಳೆ ಸೇತುವೆಯನ್ನು ರೋಟರಿ ಸಂಸ್ಥೆಯವರ ನಿರ್ವಹಣೆಗೆ ನೀಡುವುದಾಗಿ ಹೇಳಿದರು.
ರೋಟರಿ ಉಪರಾಜ್ಯಪಾಲ ಉಲ್ಲಾಸ ಕೃಷ್ಣ, ಸುವರ್ಣ ಸಂಭ್ರಮೋತ್ಸವದ ಅಧ್ಯಕ್ಷ ಎಸ್.ಕೆ. ಸತೀಶ್, ಪದಾಧಿಕಾರಿಗಳಾದ ಕ್ರಿಜ್ವಲ್ ಕೋಟ್ಸ್, ಶಿಭು ಥೋಮಸ್, ಎಸ್.ಎನ್. ರಾಜೇಂದ್ರ, ಡಾ. ಹರಿ ಎ. ಶೆಟ್ಟಿ, ಆರತಿ ಶೆಟ್ಟಿ, ಪ್ರಕಾಶ್, ಕುಶಾಲನಗರ ರೋಟರಿ ಕಾರ್ಯದರ್ಶಿ ಮಂಜುನಾಥ್, ಪ್ರಿನ್ಸ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.