ಹೊಸಪೇಟೆ: ಹಂಪಿ ಉತ್ಸವವು ಫೆ.13ರಿಂದ 15ರವರೆಗೆ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿಜಯನಗರ ಸಾಮ್ರಾಜ್ಯದ ಗತವೈಭವ, ಸುವರ್ಣಯುಗ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಫೆ.3ರಂದು ವಿಶ್ವಪಾರಂಪರಿಕ ತಾಣವಾದ ಹಂಪಿ ನಿರ್ವಹಣಾ ಪ್ರಾಧಿಕಾರ ಕಚೇರಿ ಹಿಂಭಾಗ ವಿವಿಧ ತಳಿಗಳ ಎತ್ತುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳ, ಬೋಟಿಂಗ್, ಹಂಪಿ ವಿಚಾರ ಕುರಿತು ವಿಚಾರ ಸಂಕಿರಣ ಹಾಗೂ ಆಹಾರ ಮೇಳ ಆಯೋಜಿಸಲಾಗಿದೆ. ಫೆ.14ರಂದು ಗ್ರಾಮೀಣ ಕ್ರೀಡೆ, ಸಾಹಸ ಕ್ರೀಡೆಗಳು ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿವೆ ಎಂದು ಅವರು ವಿವರಿಸಿದರು.
ಕಲಾವಿದರ ಕಲರವ:ಫೆ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಉತ್ಸವಕ್ಕೆ ಚಾಲನೆ ನೀಡುವರು. ಮುಖ್ಯ ವೇದಿಕೆಯಾದ ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿ ಗಣ್ಯರೊಂದಿಗೆ ನಟ ಶಿವರಾಜಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ರುಕ್ಮಿಣಿ ವಸಂತ್ ವೇದಿಕೆ ಹಂಚಿಕೊಳ್ಳಲಿದ್ದಾರೆ. ವೇದಿಕೆ ಕಾರ್ಯಕ್ರಮದ ನಂತರ ಗಾಯಕ ವಿಜಯ್ ಪ್ರಕಾಶ್ ಮತ್ತು ಹರಿಹರನ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀಕೃಷ್ಣ ದೇವರಾಯ (ಎದುರು ಬಸವಣ್ಣ) ವೇದಿಕೆಯಲ್ಲಿ ಶಮಿತಾ ಮಲ್ನಾಡ್ ತಂಡ, ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಕಲಾವತಿ ದಯಾನಂದ್ ತಂಡದಿಂದ ಸುಮಧುರ ಗೀತಗಾಯನ ನಡೆಸಿಕೊಡಲಿದ್ದಾರೆ.
ಫೆ.15ರಂದು ಮುಖ್ಯ ವೇದಿಕೆಯಲ್ಲಿ ನಟರಾದ ಡಾಲಿ ಧನುಂಜಯ್, ಧ್ರುವ ಸರ್ಜಾ, ರಚಿತಾರಾಮ್ ವೇದಿಕೆ ಹಂಚಿಕೊಳ್ಳಲಿದ್ದಾರೆ. ನಂತರ ರಘು ದೀಕ್ಷಿತ್, ಮಂಗಲಿ, ಮಣಿಕಾಂತ್ ಖದ್ರಿ ತಂಡದಿಂದ ಗಾಯನ ಏರ್ಪಡಿಸಲಾಗಿದೆ. ಶ್ರೀಕೃಷ್ಣ ದೇವರಾಯ (ಎದುರು ಬಸವಣ್ಣ) ವೇದಿಕೆಯಲ್ಲಿ ವಾಸುಕಿ ವೈಭವ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ. ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಬಿಗ್‌ಬಾಸ್ ವಿಜೇತ ತಂಡ ಹನುಮಂತ ಮತ್ತು ತಂಡದಿಂದ ಗೀತ ಗಾಯನದೊಂದಿಗೆ ಜನಮನ ರಂಜಿಸಲಿದ್ದಾರೆ ಎಂದರು.
ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ: ಹಂಪಿ ಉತ್ಸವದ ಮೆರಗು ಕಣ್ತುಂಬಿಕೊಳ್ಳಲು ಜಿಲ್ಲೆಯ ಎಲ್ಲ ತಾಲೂಕಿಗೆ ಮೂರು ದಿನಗಳ ಕಾಲ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ದೂರದ ಊರುಗಳಿಂದ ಬರುವವರಿಗೆ ಹಾಗೂ ಗ್ರಾಮೀಣ ಭಾಗದ ಜನತೆಗೆ ಅನುಕೂಲವಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡು ಉತ್ಸವ ಯಶಸ್ವಿಗೊಳಿಸಬೇಕು ಎಂದರು.