ಕನಕಗಿರಿ: ಮಾ. ೧೧ರಂದು ನಡೆಯುವ ಶ್ರೀ ಕನಕಾಚಲಪತಿ ಜಾತ್ರೆ ಯಶಸ್ಸಿಗೆ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಳ್ಳಲು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.
ಅಲ್ಲದೇ ಪುಷ್ಕರಣಿ ಬಳಿ ತಲೆಮಂಡಿ ನೀಡುವ ಭಕ್ತರಿಗೆ ಹಾಗೂ ಮಹಿಳೆಯರಿಗೆ ಅನುಕೂಲಕ್ಕಾಗಿ ಬಟ್ಟೆ ಬದಲಾಯಿಸಲು ತಾತ್ಕಾಲಿಕ ಶೆಡ್ ನಿರ್ಮಿಸಬೇಕು. ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ ಹಾಗೂ ಕಾರಟಗಿ ಕಡೆಗಳಲ್ಲಿ ಮಾ. ೧೦ ಹಾಗೂ ೧೧ ಎರಡು ದಿನ ಬಸ್ ಓಡಿಸಬೇಕು. ಎಪಿಎಂಸಿ, ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ, ಹೇಮರೆಡ್ಡಿ ಮಲ್ಲಮ್ಮ ವೃತ್ತ, ಕನಕದಾಸರ ವೃತ್ತ, ಗೋರಾಳಕೇರಿ ದುರ್ಗಾದೇವಿ ದೇವಸ್ಥಾನ, ರಾಜಬೀದಿ ಸೇರಿದಂತೆ ಹಲೆವೆಡೆ ಕುಡಿಯುವ ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಇನ್ನೂ ಪಾದಯಾತ್ರೆಗೆ ಬರುವ ಭಕ್ತರಿಗೆ ಪ್ರತ್ಯೇಕ ಊಟ, ವಸತಿ ಹಾಗೂ ಭಕ್ತರ ಅನುಕೂಲಕ್ಕಾಗಿ ಹೆಲ್ಪ್‌ಲೈನ್ ಮಾಡುವಂತೆ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಸೂಚಿಸಿದರು.ದೇವಸ್ಥಾನಕ್ಕೆ ಸಂಬಂಧಿಸಿದ ದಾಸೋಹ ಭವನ ಕಾಮಗಾರಿ ಪೂರ್ಣಗೊಂಡಿದ್ದು, ಕೆಆರ್‌ಐಡಿಎಲ್ ಅಧಿಕಾರಿಗಳು ದೇವಸ್ಥಾನಕ್ಕೆ ಹಸ್ತಾಂತರಿಸಿಲ್ಲ. ಈ ಕಟ್ಟಡವನ್ನು ದೇವಸ್ಥಾನ ವ್ಯಾಪ್ತಿಗೆ ತೆಗೆದುಕೊಳ್ಳುವುದರಿಂದ ಜಾತ್ರೆಗೆ ಅನುಕೂಲವಾಗಲಿದೆ. ದೇವಸ್ಥಾನ ಮಳಿಗೆಗಳ ಬಾಡಿಗೆಯನ್ನು ಹೆಚ್ಚಿಸಿದರೆ ದೇವಸ್ಥಾನಕ್ಕೆ ಆದಾಯ ಬರಲಿದೆ. ತಾತ್ಕಾಲಿಕ ಶೌಚಾಲಯಗಳ ನಿರ್ಮಿಸಬೇಕು ಎಂದು ಅಯ್ಯನಗೌಡ, ಯಂಕಾರೆಡ್ಡಿ, ಗಿರೀಶ ಶೆಟ್ಟಿ, ಗಣೇಶರೆಡ್ಡಿ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಪಪಂ ಅಧ್ಯಕ್ಷೆ ತನುಶ್ರೀ, ಉಪಾಧ್ಯಕ್ಷ ಕಂಠಿರಂಗಪ್ಪ, ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಸದಸ್ಯರಾದ ಅನಿಲಕುಮಾರ ಬಿಜ್ಜಳ, ಅಭಿಷೇಕ ಕಲುಬಾಗಿಲಮಠ, ರಾಜಸಾಬ ನಂದಾಪುರ, ರಾಕೇಶ, ಸಂಗಪ್ಪ ಸಜ್ಜನ, ಸಂಘಟಕರಾದ ಶರಣಪ್ಪ ಸಜ್ಜನ, ಹರೀಶ ಪೂಜಾರ, ಬಸವರಾಜ ಕೋರಿ, ಕನಕಪ್ಪ ಮ್ಯಾಗಡೆ ಸೇರಿದಂತೆ ಇತರರಿದ್ದರು.
ಕಳೆದ ವರ್ಷ ಕೆಲವರು ರಾಜಕೀಯ ದುರುದ್ದೇಶದಿಂದ ಕನಕಗಿರಿ ಉತ್ಸವ ವಿರೋಧಿಸಿದರು. ಇದರಿಂದ ನಾನು ಉತ್ಸವ ಆಚರಣೆಯಿಂದ ಹಿಂದೆ ಸರಿದೆ. ಈ ವರ್ಷವೂ ಸ್ಥಳೀಯರು ಪಕ್ಷಾತೀತವಾಗಿ ಒಪ್ಪಿದರೆ ಮಾತ್ರ ಉತ್ಸವ ಆಚರಿಸಲು ಮುಂದಾಗುತ್ತೇನೆ. ಕೆಲವರು ನೇರವಾಗಿ, ಇನ್ನೂ ಕೆಲವರು ದೂರವಾಣಿಯಲ್ಲಿ ಉತ್ಸವ ಆಚರಿಸುವಂತೆ ಹೇಳುತ್ತಿದ್ದಾರೆ. ಸದ್ಯಕ್ಕೆ ನಾನು ಉತ್ಸವ ಆಚರಣೆ ಕುರಿತಂತೆ ಏನೂ ಹೇಳಲು ಇಚ್ಛಿಸುವುದಿಲ್ಲ. ಸ್ಥಳೀಯವಾಗಿ ಸಭೆ ಆಯೋಜಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.