ಜನಸ್ಪಂದನಾ ಸಭೆಯಲ್ಲಿ ಶಾಸಕ ಎಚ್ಚರಿಕೆ । 172 ಅರ್ಜಿ ಸಲ್ಲಿಕೆ, 110 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ
ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಾರದೊಳಗೆ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸದೇ ಉದಾಸೀನ ತೋರಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ತಾಲೂಕಿನ ಕಾನಸೂರಿನ ಕಾಳಿಕಾಭವಾನಿ ಪ್ರೌಢಶಾಲೆಯ ಸಭಾಭವನದಲ್ಲಿ ಉಂಬಳಮನೆ ಹೋಬಳಿಯ ಜನಸ್ಪಂದನಾ ಸಭೆ ಉದ್ಘಾಟಿಸಿ ಮಾತನಾಡಿದರು.ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜವಾಬ್ದಾರಿಯಾಗಿದೆ. ಸಭೆಯಲ್ಲಿ ಸಾರ್ವಜನಿಕರು ತಮ್ಮ ಭಾಗಕ್ಕೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿ ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್ ವಾರದೊಳಗೆ ಸ್ಥಳಕ್ಕೆ ತೆರಳಿ ವಾಸ್ತವ ವರದಿಯನ್ನು ತಾಲೂಕಾ ದಂಡಾಧಿಕಾರಿಗೆ ಸಲ್ಲಿಸಬೇಕು. ಇದರಲ್ಲಿ ಯಾರಾದರೂ ಉದಾಸೀನ ತೋರಿದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ವರಿಕೆ ನೀಡಿದರು.
172 ಅರ್ಜಿ ಸಲ್ಲಿಕೆ:ತಾಲೂಕಿನ ಕಾನಸೂರ, ಹಸರಗೋಡ, ತ್ಯಾಗಲಿ, ತಂಡಾಗುಂಡಿ, ಅಣಲೇಬೈಲ್, ಹಾರ್ಸಿಕಟ್ಟಾ, ಹೆಗ್ಗರಣಿ, ನಿಲ್ಕುಂದ ಗ್ರಾಪಂಯನ್ನು ಒಳಗೊಂಡ ಉಂಬಳಮನೆ ಹೋಬಳಿಯ ಜನಸ್ಪಂದನಾ ಸಭೆಯಲ್ಲಿ 172 ಅರ್ಜಿಗಳು ಸಲ್ಲಿಕೆಯಾಗಿದ್ದು, ಶಾಸಕ ಭೀಮಣ್ಣ ನಾಯ್ಕ ಸಂಜೆಯವರೆಗೂ ಸಮಾಧಾನದಿಂದ ಜನರ ಅಹವಾಲು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪರಿಹರಿಸಬೇಕು. ಒಂದು ವೇಳೆ ತಮ್ಮ ವ್ಯಾಪ್ತಿಯಲ್ಲಿ ಬಗೆಹರಿಯದ ಸಮಸ್ಯೆಯಾದರೆ ತಾಲೂಕಾ ದಂಡಾಧಿಕಾರಿಗೆ ವರದಿ ನೀಡುವಂತೆ ಸೂಚಿಸಿದರು. ರಸ್ತೆ, ಸೇತುವೆ, ಕುಡಿಯುವ ನೀರು, ಸಭಾಭವನ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದರು.
ಈ ವೇಳೆ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಕಾನಸೂರ ಗ್ರಾಪಂ ಅಧ್ಯಕ್ಷೆ ವನಿತಾ ನಾಯ್ಕ, ತಾಲೂಕಾ ದಂಡಾಧಿಕಾರಿ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಹಾಗೂ ಎಲ್ಲಾ ಗ್ರಾಪಂಗಳ ಅಧ್ಯಕ್ಷರು ಹಾಜರಿದ್ದರು.ಸಭೆಯಲ್ಲಿ ವಿವಿಧ ಸಮಸ್ಯೆಗಳನ್ನು ಒಳಗೊಂಡ 172 ಅರ್ಜಿಗಳು ಸಲ್ಲಿಕೆಯಾಗಿದ್ದು, 110 ಅರ್ಜಿಗಳಿಗೆ ಶಾಸಕರು ಸ್ಥಳದಲ್ಲೇ ಪರಿಹಾರ ನೀಡಿದರು.