ಉಡುಪಿ: ಶಿಕ್ಷಣ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯು ಆರೋಗ್ಯ ಸೇವೆಯಲ್ಲಿಯೂ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ಜಿಲ್ಲೆಯ ವೈದ್ಯರು ಗುಣಮಟ್ಟದ ಆರೋಗ್ಯ ಸೇವೆ ನೀಡುವ ಮೂಲಕ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾರೆ. ಜನರು ಕೂಡ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ವತಿಯಿಂದ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೂತನ ಜಿಲ್ಲಾಸ್ಪತ್ರೆಯ ಕಾಮಗಾರಿಗಳು ಶೇ. 70ರಷ್ಟು ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಆಸ್ಪತ್ರೆಯು ಸಾರ್ವಜನಿಕರಿಗೆ ಮುಕ್ತವಾದರೆ ಜಿಲ್ಲೆಯ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಲಿದೆ ಎಂದರು.
ಎಂಸಿಎಚ್ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ಡಾ. ಕವಿತಾ ಹಾಗೂ ಆದರ್ಶ ಆಸ್ಪತ್ರೆ ಕ್ಯಾನ್ಸರ್ ತಜ್ಞ ಡಾ. ಅನಂತ ಎಸ್. ಮಠದ್ ಕ್ಯಾನ್ಸರ್ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭ ಕೀಮೋ ಚಿಕಿತ್ಸೆ ಫಲಾನುಭವಿಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ಕಾರ್‍ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್, ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ್, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಕಾರ್‍ಯಕ್ರಮ ಅಧಿಕಾರಿ ಡಾ. ಲತಾ ನಾಯಕ್, ಆದರ್ಶ ಆಸ್ಪತ್ರೆ ಮುಖ್ಯಸ್ಥ ಡಾ. ಜಿ.ಎಸ್. ಚಂದ್ರಶೇಖರ್, ಫುಡ್ ಫಾರ್ ದ ಹಂಗ್ರಿ ಫೌಂಡೇಶನ್ ನ ನಿಧಿ, ಐಎಂಎ ಅಧ್ಯಕ್ಷ ಡಾ. ಅಶೋಕ್ ಕುಮಾರ್, ಕಾರ್‍ಯದರ್ಶಿ ಡಾ. ಮಾನಸ ಈ.ಆರ್. ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್ ರಾವ್ ಸ್ವಾಗತಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಚಂದ್ರಕಲಾ ನಿರೂಪಿಸಿ, ಶಶಿಧರ್ ಎಚ್. ವಂದಿಸಿದರು. ಕಾರ್‍ಯಕ್ರಮದ ನಂತರ ಜಿಲ್ಲಾ ಆಸ್ಪತ್ರೆ ಆವರಣದಿಂದ ಬ್ರಹ್ಮಗಿರಿ ಸರ್ಕಲ್ ಸುತ್ತುವರಿದು ಪುನಃ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸಮಾಪನಗೊಂಡ ಕ್ಯಾನ್ಸರ್ ಜಾಗೃತಿ ಜಾಥಾಕ್ಕೆ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್ ಬೆಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.