ಕನ್ನಡಪ್ರಭ ವಾರ್ತೆ ಕುಶಾಲನಗರವಾಸವಿ ಯುವಜನ ಸಂಘ ಮತ್ತು ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಆಶ್ರಯದಲ್ಲಿ ವಾಸವಿ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.
ಶಿಬಿರದಲ್ಲಿ ಒಟ್ಟು 44 ಮಂದಿ ರಕ್ತದಾನಿಗಳು ಪಾಲ್ಗೊಂಡಿದ್ದರು. 50ನೇ ಬಾರಿ ರಕ್ತದಾನ ಮಾಡಿದ ಉದ್ಯಮಿ ಎಲ್.ಸಂತೋಷ್ ಅವರನ್ನು ವಾಸವಿ ಯುವಜನ ಸಂಘದ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭ ನಡೆದ ಸರಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸವಿ ಯುವಜನ ಸಂಘ ಅಧ್ಯಕ್ಷ ಕೆ.ಪ್ರವೀಣ್ ವಹಿಸಿದ್ದರು. ಕುಶಾಲನಗರ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಶಿವಕುಮಾರ್ ಕೆ.ಎನ್. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಯುವಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು. ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರಿಗೆ ಸಹಾಯ ನೀಡುವ ಅವಕಾಶ ಲಭಿಸಲಿದೆ. ನಮ್ಮ ಆರೋಗ್ಯದ ಜೊತೆಗೆ ಮತ್ತೊಬ್ಬರ ಪ್ರಾಣವನ್ನು ಕೂಡ ಉಳಿಸಬಹುದು ಎಂದರು.ಮಡಿಕೇರಿ ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ವಾಸವಿ ಯುವಜನ ಸಂಘದ ವತಿಯಿಂದ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಪ್ರಸಕ್ತ ದಿನಗಳಲ್ಲಿ ರಕ್ತದ ಅವಶ್ಯಕತೆ ಅತೀ ಹೆಚ್ಚಿದ್ದು ಇತರೆ ಸಂಘ ಸಂಸ್ಥೆಗಳು ಕೂಡ ರಕ್ತದಾನ ಶಿಬಿರ ಆಯೋಜಿಸುವ ಅಗತ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕಾರ್ಯಕಾರಿ ಮಂಡಳಿ ಸದಸ್ಯ ಬಿ.ಆರ್. ನಾಗೇಂದ್ರ ಪ್ರಸಾದ್, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕೊಡಗು ಜಿಲ್ಲಾ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಆರ್ಯವೈಶ್ಯ ಮಂಡಳಿಯ ಕಾರ್ಯದರ್ಶಿ ಬಿ.ಎಲ್. ಅಶೋಕ್, ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಯುವತಿಯರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಅಶ್ವಿನಿ ಸುಂದರ್, ವಾಸವಿ ಯುವಜನ ಸಂಘದ ಕಾರ್ಯದರ್ಶಿ ಬಿ.ಎನ್. ಅಂಜನ್, ಉಪಾಧ್ಯಕ್ಷ ವೈಶಾಖ್ ವಿ. ಮತ್ತು ಬಾಲಾಜಿ ವಿ.ಜೆ., ಸಹಕಾರ್ಯದರ್ಶಿ ನಾಗಶ್ರೇಯಸ್ಸ್ ವಿ.ಎಂ., ನಿರ್ದೇಶಕ ನಿಖಿಲ್ ಎನ್., ರವಿಪ್ರಕಾಶ್ ಎಂ.ಬಿ., ರಾಕೇಶ್ ಪಿ.ಆರ್. ಮತ್ತು ರಕ್ತ ನಿಧಿ ಕೇಂದ್ರದ ಸಿಬ್ಬಂದಿ ಇದ್ದರು.