ಕನ್ನಡಪ್ರಭ ವಾರ್ತೆ ಕುಷ್ಟಗಿ
ಕಾಂಗ್ರೆಸ್ ಪುರಸಭೆಯ ಸದಸ್ಯರಾದ ವಿಜಯಲಕ್ಷ್ಮಿ ಕಟ್ಟಿಮನಿ ಮತ್ತು ರಾಮಣ್ಣ ಬಿನ್ನಾಳ ಅಧ್ಯಕ್ಷ ಸ್ಥಾನದ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಚುನಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಸ್ತುತ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿತ್ತು. ಈ ಹಿಂದೆ ಎರಡು ಬಾರಿಯು ಸಹಿತ ಪರಿಶಿಷ್ಟ ಪಂಗಡಕ್ಕೆ ಅಧ್ಯಕ್ಷ ಸ್ಥಾನ ಮೀಸಲಿರಿಸಲಾಗಿತ್ತು. ಈಗ ಮತ್ತೆ ಅದೇ ಮೀಸಲಾತಿಯು ಬಂದ ಹಿನ್ನೆಲೆ ಅದನ್ನು ತಡೆ ಹಿಡಿಯಬೇಕು ಎಂದು ಅರ್ಜಿ ಸಲ್ಲಿಸಿದ್ದರು, ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ಆದೇಶದವರೆಗೂ ಚುನಾವಣೆ ನಡೆಸದಂತೆ ಆದೇಶ ಹೊರಡಿಸಿದೆ.ನಿರಾಸೆ:23 ಪುರಸಭೆಯ ಸದಸ್ಯರ ಪೈಕಿ ಬಿಜೆಪಿ ಪುರಸಭೆ ಸದಸ್ಯ ಮಹಾಂತೇಶ ಕಲಬಾವಿ ಒಬ್ಬರೆ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಬಹುತೇಕ ಅಧ್ಯಕ್ಷರಾಗುವುದು ಖಚಿತ ಎಂದು ಸಂತಸಪಟ್ಟಿದ್ದರು. ಆದರೆ, ಕೋರ್ಟ್ ತಡೆಯಾಜ್ಞೆ ಹಿನ್ನೆಲೆ ಅವರಿಗೆ ನಿರಾಸೆವುಂಟಾಗಿದೆ.
ಕೊಪ್ಪಳ ಸಮೀಪದ ಭಾಗ್ಯನಗರದ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇದ್ದು, ತಡರಾತ್ರಿಯವರೆಗೂ ಕಾಂಗ್ರೆಸ್ ಹೈಕಮಾಂಡ್ ಗೌಪ್ಯವಾಗಿಯೇ ಇಟ್ಟಿದೆ.
ಹೀಗಾಗಿ, ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಷ್ಟಾಗಿ ಯಾವುದೇ ಚಟುವಟಿಕೆ ಪಕ್ಷದಲ್ಲಿ ಕಂಡು ಬರುತ್ತಿಲ್ಲ.
2 ವರ್ಷ 8 ತಿಂಗಳು:ಭಾಗ್ಯನಗರ ಪಟ್ಟಣ ಸದಸ್ಯರು ಆಯ್ಕೆಯಾಗಿ ಬರೋಬ್ಬರಿ 2 ವರ್ಷ 8 ತಿಂಗಳು ಆಗಿದೆ. ಈಗ ಇವರ ಅಧಿಕಾರವಧಿ ಪ್ರಾರಂಭವಾಗುತ್ತದೆ. ಮೀಸಲಾತಿ ವಿಷಯ ಕೋರ್ಟಿನಲ್ಲಿದ್ದಿದ್ದರಿಂದ ಆಯ್ಕೆಯಾದ ಮೇಲೆ ಇದುವರೆಗೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಹೀಗಾಗಿ, ಆಯ್ಕೆಯಾದ ಈ ಬಾರಿ ಸದಸ್ಯರು ಬರೋಬ್ಬರಿ 8 ವರ್ಷ ಅಧಿಕಾರದಲ್ಲಿದ್ದಂತೆ ಆಗುತ್ತದೆ. ಅಂತೂ ಈಗಲಾದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯುತ್ತಿದೆಯಲ್ಲ, ಯಾರು ತಡೆಯಾಜ್ಞೆ ತರದಿರಲಿ ಎಂದು ಸದಸ್ಯರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.