ಕುಷ್ಟಗಿ: ತಾಲೂಕಿನಲ್ಲಿ ಅ. 25ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಶತಮಾನೋತ್ಸವ ಹಾಗೂ ವಿಜಯದಶಮಿ ಪ್ರಯುಕ್ತ ಭವ್ಯ ಪಥಸಂಚಲನದ ತಯಾರಿ ಜೋರಾಗಿ ನಡೆಯುತ್ತಿವೆ.
ಈ ಹಿನ್ನೆಲೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಅನೇಕ ಬಿಜೆಪಿ ನಾಯಕರು ಆರ್ ಎಸ್ ಎಸ್ ಗಣವೇಶದಲ್ಲಿ ಆನ್‌ಲೈನ್ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಂಘದ ಶತಮಾನೋತ್ಸವ ಮತ್ತು ವಿಜಯದಶಮಿ ಪಥಸಂಚಲನ ಯಶಸ್ವಿಗೊಳಿಸಲು ವ್ಯಾಟ್ಸ್‌ಆ್ಯಪ್ ಗುಂಪು, ಫೇಸ್‌ಬುಕ್, ಇನ್ಸ್ಟಾಗ್ರಾಮ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಆಹ್ವಾನ ಪತ್ರಿಕೆ, ಪೋಸ್ಟರ್ ಹಾಗೂ ದೇಶಭಕ್ತಿ ಸಂದೇಶಗಳು ಹರಿದಾಡುತ್ತಿವೆ.
ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಪ್ರಬಲ ಸ್ಪರ್ಧೆಯ ನಡುವೆಯೇ ಆರ್.ಎಸ್.ಎಸ್ ನ ಶತಮಾನೋತ್ಸವ ಪಥಸಂಚಲನ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ.ಅ. 25ರಂದು ನಡೆಯುವ ಈ ಪಥಸಂಚಲನದಲ್ಲಿ ಸಾವಿರಾರು ಸ್ವಯಂಸೇವಕರು, ವಿದ್ಯಾರ್ಥಿಗಳು, ಮಹಿಳಾ ಕಾರ್ಯಕರ್ತೆಯರು ಹಾಗೂ ವಿವಿಧ ಸಮಾಜ ಘಟಕಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ತಾಲೂಕಿನ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಸಾಗಲಿದ್ದು, ಸ್ಥಳೀಯರು ದೀಪಾಲಂಕಾರ, ಹೂವಿನ ಅಲಂಕಾರ ಹಾಗೂ ಸ್ವಾಗತ ಕಮಾನು ಮೂಲಕ ಭಾಗವಹಿಸಲು ಸಜ್ಜಾಗಿದ್ದಾರೆ.
ಅ. 25ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಪಥಸಂಚಲನ ಕಾರ್ಯಕ್ರಮಕ್ಕೆ ಸರ್ಕಾರದ ನಿಗದಿತ ಮಾರ್ಗಸೂಚಿಗಳ ಪ್ರಕಾರ ಅಧಿಕೃತ ಅನುಮತಿ ನೀಡಲಾಗಿದೆ ಎಂದು ಕುಷ್ಟಗಿ ತಹಸೀಲ್ದಾರ್ ಅಶೋಕ್ ಶಿಗ್ಗಾವಿ ತಿಳಿಸಿದ್ದಾರೆ.