ಕೂಸಿನ ಮನೆಯೇ ಮೊದಲ ಪಾಠಶಾಲೆ, ಆರೈಕೆದಾರರೇ ಮೊದಲ ಗುರು

KannadaprabhaNewsNetwork | Published : Feb 2, 2024 1:04 AM

ಸಾರಾಂಶ

ನಿಪ್ಪಾಣಿ ಹಾಗೂ ಕಾಗವಾಡ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಕೂಸಿನ ಮನೆಯ ಆರೈಕೆದಾರರು ಕ್ಷೇತ್ರ ಭೇಟಿ ಮಾಡಿ, ಪ್ರಾಯೋಗಿಕ ತರಬೇತಿ ಪಡೆದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತು ಇಲ್ಲಿಯವರೆಗೆ ಇತ್ತು. ಆದರೆ, ಇನ್ನು ಮುಂದೆ ಕೂಸಿನ ಮನೆಯೇ ಮೊದಲ ಪಾಠಶಾಲೆ, ಆರೈಕೆದಾರರೇ ಮೊದಲ ಗುರು ಎಂಬ ಮಾತನ್ನು ನಾವು ಹೇಳಬಹುದಾಗಿದೆ ಎಂದು ನಾಗರಗಾಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅರ್ಚನಾ ಪಾಟೀಲ ಹೇಳಿದರು.

ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಂಚೇವಾಡಿ ಗ್ರಾಮದಲ್ಲಿ ಸೋಮವಾರ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ನಾಗರಗಾಳಿ ವತಿಯಿಂದ ಹಮ್ಮಿಕೊಂಡಿದ್ದ ಕೂಸಿನ ಮನೆ ಉದ್ಘಾಟನಾ ಕಾರ್ಯಕ್ರಮ ಹಾಗೂ ಖಾನಾಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಆರೈಕೆದಾರರ ಕ್ಷೇತ್ರ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 7 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳ ಲಾಲನೆ, ಪಾಲನೆಗಾಗಿ ಕೂಸಿನ ಮನೆಗಳನ್ನು ನಿರ್ಮಿಸಿರುವುದರಿಂದ ಇನ್ನುಮುಂದೆ ಕೂಸಿನ ಮನೆಗಳೇ ಮಕ್ಕಳಿಗೆ ಪಾಠಶಾಲೆಗಳಾಗಲಿವೆ. ಇದರಿಂದ ಮಕ್ಕಳು ಬೌದ್ಧಿಕವಾಗಿಯೂ ವಿಕಸನವಾಗಲು ಅನುಕೂಲವಾಗುತ್ತದೆ ಎಂದರು.

ಹೀಗಾಗಿ, ನರೇಗಾ ಕೂಲಿಕಾರರು ಸರ್ಕಾರ ಜಾರಿಗೊಳಿಸಿರುವ ಈ ಯೋಜನೆಯ ಸದುಪಯೋಗ ಪಡೆಯಬೇಕು. ತಮ್ಮ ಮಕ್ಕಳ ಪಾಲನೆಯ ಬಗ್ಗೆ ಚಿಂತಿಸಿದೆ, ಕೂಸಿನ ಮನೆಗೆ ಮಕ್ಕಳನ್ನು ಸೇರಿಸಬೇಕು ಎಂದು ಮನವಿ ಮಾಡಿದರು.

ವಿಕೇಂದ್ರೀಕೃತ ತರಬೇತಿ ಸಂಯೋಜಕಿ ಆರತಿ ನವಲೂರ ಮಾತನಾಡಿ, ಕೂಸಿನ ಮನೆಯ ಆರೈಕೆದಾರರಿಗೆ ಮಕ್ಕಳನ್ನು ನೋಡಿಕೊಳ್ಳಲು 7 ದಿನಗಳವರೆಗೆ ವಸತಿ ಸಹಿತ ತರಬೇತಿ ನೀಡಲಾಗುತ್ತಿದೆ. ಆರೈಕೆದಾರರು ಎಲ್ಲ ಮಕ್ಕಳನ್ನು ಉತ್ತಮವಾಗಿ ನೋಡಿಕೊಳ್ಳಲಿದ್ದಾರೆ. ಜತೆಗೆ ಮಕ್ಕಳಿಗೆ ಇಲ್ಲಿ ಪೌಷ್ಟಿಕ ಆಹಾರ ಒದಗಿಸಲಾಗುವುದು. ಶಿಸ್ತು, ಸ್ವಚ್ಛತೆ ಸೇರಿ ಉತ್ತಮ ಮೌಲ್ಯಗಳನ್ನು ಕಲಿಸಲಾಗುವುದು ಎಂದು ತಿಳಿಸಿದರು.ತರಬೇತುದಾರರಾದ ಸವಿತಾ ಮಾದರ, ಸಾವಿತ್ರಿ ತಮದಡ್ಡಿ, ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ, ಗ್ರಾಮ ಪಂಚಾಯತಿ ಸದಸ್ಯರಾದ ಬಾಳಕೃಷ್ಣ ನಾಯ್ಕ, ಸುನೀಲ ಪ್ರಭು, ದತ್ತಾದಿಗಂಬರ ಪಾಟೀಲ, ಲಕ್ಷ್ಮಿ ಕಾಂಬಳೆ ಸೇರಿದಂತೆ ಆರೈಕೆದಾರರು, ಮಕ್ಕಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇದ್ದಲಹೊಂಡ ಕೂಸಿನ ಮನೆ ಉದ್ಘಾಟನೆ:

ಖಾನಾಪೂರ ತಾಲೂಕಿನ ಇದ್ದಲಹೊಂಡ ಗ್ರಾಪಂ ವ್ಯಾಪ್ತಿಯ ಮಾಳಅಂಕಲೆ ಗ್ರಾಮದಲ್ಲಿ ನಿರ್ಮಿಸಿರುವ ಕೂಸಿನ ಮನೆಯನ್ನು ಸೋಮವಾರ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀ ಬಾಬು ನಾಯಿಕ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಲಿರಾಮ ದೇಸಾಯಿ ಉದ್ಘಾಟಿಸಿದರು.

ನಿಪ್ಪಾಣಿ ಹಾಗೂ ಕಾಗವಾಡ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಕೂಸಿನ ಮನೆಯ ಆರೈಕೆದಾರರು ಕ್ಷೇತ್ರ ಭೇಟಿ ಮಾಡಿ, ಪ್ರಾಯೋಗಿಕ ತರಬೇತಿ ಪಡೆದರು.

ಕಾರ್ಯಕ್ರಮದಲ್ಲಿ ತರಬೇತುದಾರರಾದ ಸರೋಜಾ ನವಲೆ, ಸುಜಾತಾ ಪಾಟೀಲ, ಐಇಸಿ ಸಂಯೋಜಕ ಶಶಿಕಾಂತ ಜೋರೆ, ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿ, ಆರೈಕೆದಾರರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Share this article