ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ನೀಡಿದ ಕೂಸಿನ ಮನೆ

KannadaprabhaNewsNetwork |  
Published : Jan 18, 2024, 02:04 AM IST
ನರಗುಂದ ತಾಪಂ ಸಭಾಭವನದಲ್ಲಿ ಕೂಸಿನ ಮನೆ ತರಬೇತಿ ಕಾರ್ಯಗಾರವನ್ನು ತಾಪಂ ಅಧಿಕಾರಿ ಶ್ಯಾಮಸುಂದರ ಇನಾಮತಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕೂಸಿನ ಮನೆ ಆರೈಕೆದಾರರಿಗೆ ನರಗುಂದ ತಾಪಂ ಸಭಾಭವನದಲ್ಲಿ ಮೂರು ದಿನಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಕೂಸಿನ ಮನೆ ಕಾರ್ಯಕ್ರಮ ಅನುಷ್ಠಾನದಿಂದ ಗ್ರಾಮೀಣ ಮಹಿಳಾ ಕೂಲಿಕಾರರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ತಾಪಂ ಅಧಿಕಾರಿ ಶ್ಯಾಮಸುಂದರ ಇನಾಮತಿ ಹೇಳಿದರು.

ನರಗುಂದ: ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗದ ಮಕ್ಕಳ ಲಾಲನೆ-ಪಾಲನೆಗೆ ರಾಜ್ಯ ಸರ್ಕಾರದ ಕೂಸಿನ ಮನೆ ಕಾರ್ಯಕ್ರಮ ವರದಾನವಾಗಿದೆ. ಕೂಸಿನ ಮನೆ ಕಾರ್ಯಕ್ರಮ ಅನುಷ್ಠಾನದಿಂದ ಗ್ರಾಮೀಣ ಮಹಿಳಾ ಕೂಲಿಕಾರರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ತಾಪಂ ಅಧಿಕಾರಿ ಶ್ಯಾಮಸುಂದರ ಇನಾಮತಿ ಹೇಳಿದರು.

ಅವರು ಬುಧವಾರ ತಾಪಂ ಸಭಾಭವನದಲ್ಲಿ ಆಯೋಜಿಸಿದ್ದ ಕೂಸಿನ ಮನೆ ಆರೈಕೆದಾರರ ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ನರೇಗಾ ಕೆಲಸಕ್ಕೆ ಬರುವ ಮಹಿಳೆಯರು ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಬರುವುದರಿಂದ ಮಕ್ಕಳಿಗೆ ಲಾಲನೆ-ಪಾಲನೆ ಜತೆಗೆ ಪೌಷ್ಟಿಕಾಂಶವುಳ್ಳ ಆಹಾರ ದೊರಕುತ್ತದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಉದ್ಯೋಗವೂ ಸಿಗುವ ಜತೆಗೆ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯೂ ನೀಗುತ್ತದೆ ಎಂದು ತಿಳಿಸಿದರು.ಗ್ರಾಮೀಣ ಪ್ರದೇಶದ ಮಕ್ಕಳ ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಅಂತೆಯೇ ತಾಲೂಕಿನಲ್ಲಿ ಏಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಸಿನ ಮನೆ ಆರಂಭಿಸಿ ಅದರ ಕೇರ್ ಟೇಕರ್ಸ್‌ಗಳಿಗೆ (ಆರೈಕೆದಾರರು) ಮೂರು ದಿನಗಳ ತರಬೇತಿ ನೀಡುತ್ತಿರುವುದು ಸಂತೋಷದ ತಂದಿದೆ ಎಂದರು. ತಾಪಂ ಐಇಸಿ ಸಂಯೋಜಕ ಸುರೇಶ್ ಬಾಳಿಕಾಯಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ೧೦೯ ಕೂಸಿನ ಮನೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಅದರಂತೆ ಮೊದಲ ಹಂತದಲ್ಲಿ ೬೯ ಕೂಸಿನ ಮನೆಗಳನ್ನು ಜಿಲ್ಲೆಯಾದ್ಯಂತ ಆರಂಭಿಸಲಾಗುತ್ತಿದ್ದು, ತಾಲೂಕಿನಲ್ಲಿ ಒಟ್ಟು ೭ ಕೂಸಿನ ಮನೆಗಳನ್ನು ಅರಂಭಿಸಲಾಗುತ್ತಿದೆ ಎಂದರು. ಸರ್ಕಾರ ಜಾರಿಗೆ ತಂದಿರುವ ಕೂಸಿನ ಮನೆ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಬಗ್ಗೆ ಆರೈಕೆದಾರರಿಗೆ ಮಾಹಿತಿ ನೀಡಿದರು.ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಸಂತೋಷಕುಮಾರ ಪಾಟೀಲ, ಅಕ್ಷರ ದಾಸೋಹ ಅಧಿಕಾರಿ ಆನಂದ ಭೋವಿ, ತರಬೇತುದಾರರಾದ ವೀರಭದ್ರಪ್ಪ ಸಜ್ಜನ, ಮಂಜುಳಾ ಗುರಾಣಿ ಶಕುಂತಲಾ ಗಣಿ, ಪ್ರದೀಪ ಕದಂಬ, ಚಿಕ್ಕನರಗುಂದ, ಹುಣಶಿಕಟ್ಟಿ, ಕನಕಿಕೊಪ್ಪ, ಸುರಕೋಡ, ರೆಡ್ಡರನಾಗನೂರು, ಕೊಣ್ಣೂರು ಹಾಗೂ ಹಿರೇಕೊಪ್ಪ ಗ್ರಾಪಂಯ ಕೂಸಿನ ಮನೆ ಆರೈಕೆದಾರರು, ತಾಪಂ ಸಿಬ್ಬಂದಿ ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ