ಕನ್ನಡಪ್ರಭ ವಾರ್ತೆ, ಕಡೂರುಕ್ಷೇತ್ರ ಶಿಕ್ಷಣಾಧಿಕಾರಿಗಳ ನಿಂದನೆಯಿಂದ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣರಾದ ಬಿಇಒರನ್ನು ಕೂಡಲೇ ಅಮಾನತು ಮಾಡಬೇಕು ಎಂದು ತಾಲೂಕು ಮಡಿವಾಳ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಕಡೂರು ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಡಿವಾಳ ಸಮಾಜದ ತಾಲೂಕು ಸಂಘಟನಾ ಕಾರ್ಯದರ್ಶಿ ಷಡಾಕ್ಷರಿ ಮಾತನಾಡಿ ತಾಲೂಕಿನ ಯಗಟಿ ಹೋಬಳಿ ಯಳ್ಲಂಬಳಸೆ ಗ್ರಾಮದ ಅಂಜನಪ್ಪನವರ ಪುತ್ರಿ ಶ್ರೀಮರುಳ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದು, 2026ರ ಜ. 20 ರಂದು ರಾತ್ರಿ 9 ಗಂಟೆಗೆ ಕಡೂರು ಕ್ಷೇತ್ರ ಶಿಕ್ಷಣಾ ಧಿಕಾರಿ ಎಂ.ಎಚ್. ತಿಮ್ಮಯ್ಯ ವಿದ್ಯಾರ್ಥಿನಿ ಮನೆಗೆ ಬಂದು ಮೊದಲ ಪ್ರಿಪರೆಟರಿಯಲ್ಲಿ 500 ಅಂಕಗಳಿಗೆ ಕೇವಲ 93 ಅಂಕ ಪಡೆದಿರುವುದಕ್ಕೆ ನಿಂದಿಸಿ, ಇಂಗ್ಲೀಷ್ ನಲ್ಲಿ 09 ಅಂಕ ಪಡೆದಿದ್ದೀಯಾ ಎಂದು ಹೀಗಳೆದಿದ್ದಾರೆ ಎಂದು ಆರೋಪಿಸಿದರು.ಇಂಗ್ಲೀಷ್ ಮೇಷ್ಟ್ರಿಗೆ ಪೋನ್ ಮಾಡಿ ವಿದ್ಯಾರ್ಥಿನಿ ಪೋಟೋ ತೆಗೆದುಕೊಂಡು ಹೋಗಿದ್ದರು. ಅಂದಿನಿಂದ ಯಾರ ಬಳಿ ಮಾತನಾಡದೆ ಆಕೆ ಭಯದಲ್ಲಿದ್ದಳು. ಒಂದು ವಾರದ ನಂತರ ಜ. 27ರಂದು ಕನ್ನಡ ಪರೀಕ್ಷೆ, 29ಕ್ಕೆ ಗಣಿತ ಪರೀಕ್ಷೆ ಬರೆದಳು. 29 ರಂದು ಇಂಗ್ಲೀಷ್ ಪರೀಕ್ಷೆ ಬರೆಯಬೇಕಿತ್ತು, ಆದರೆ ಜ. 29 ರ ರಾತ್ರಿ ಅವರೆ ಕಾಳಿಗೆ ಹುಳ ಬೀಳದಂತೆ ಹಾಕುವ ಮಾತ್ರೆ ನುಂಗಿದ್ದಾಳೆ ಎಂದರು.ವಾಂತಿ ಮಾಡಿದ ಬಳಿಕೆ ಮಾತ್ರೆ ನುಂಗಿರುವುದು ತಿಳಿದು ಅವಳನ್ನುಕೂಡಲೇ ಕಡೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಳು ಎಂದರು.ಪರೀಕ್ಷೆ ಇನ್ನೂ ಮಾರ್ಚ್ ತಿಂಗಳಲ್ಲಿ ಇದ್ದರೂ ಬಿಇಒ ಬಂದು ನನ್ನ ಮಗಳಿಗೆ ನಿಂದಿಸಿದ ಕಾರಣ ಆತ್ಮಹತ್ಯೆ ಮಾಡಿ ಕೊಂಡಿದ್ದು, ನನ್ನ ಮಗಳ ಸಾವಿಗೆ ಬಿಇಒ ಕಾರಣ. ಅವರ ಮೇಲೆ ಕ್ರಮ ಕೈಗೊಂಡು ನ್ಯಾಯ ಕೊಡಿಸಿ ಎಂದು ಆಕೆ ತಂದೆ ವೈ.ಸಿ ಅಂಜನಪ್ಪ ಒತ್ತಾಯಿಸಿದರು.ತಾಲೂಕು ಮಡಿವಾಳ ಸಮಾಜದ ಸಂಘಟನಾ ಕಾರ್ಯದರ್ಶಿ ಷಡಾಕ್ಷರಿ ಮಾತನಾಡಿ. ವಿದ್ಯಾರ್ಥಿನಿ ಸಾವಿಗೆ ಕಾರಣರಾದ ಬಿಇಒ ತಿಮ್ಮಯ್ಯ ಮೇಲೆ ಕ್ರಮ ಜರುಗಿಸದಿದ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಅವರನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದರು.ಮುಖಂಡ ಮಂಜುನಾಥ್, ವಿದ್ಯಾರ್ಥಿನಿ ಸಾವಿಗೆ ಕಾರಣರಾದ ಬಿಇಒರನ್ನು ಅಮಾನತ್ತು ಮಾಡಿ ಕಠಿಣ ಕ್ರಮ ಜರುಗಿಸಬೇಕು. ಇಲ್ಲದೇ ಹೋದಲ್ಲಿ ಮಡಿವಾಳ ಸಮಾಜದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅರೆಬೆತ್ತಲೆ ಮೆರವಣಿಗೆ ನಡೆಸಿ ಕುಟುಂಬದ ಪರವಾಗಿ ನಿರಂತರ ಹೋರಾಟ ನಡೆಸಲಾಗುವುದು. ಇದೀಗ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಲಾಗುವುದು ಎಂದರು.ಜಿಲ್ಲಾ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ಸಮಾಜ ಮುಖಂಡ ಮಂಜುನಾಥ್, ಮರುಳ ಸಿದ್ದಪ್ಪ,ರವಿಕುಮಾರ್, ತಿಮ್ಮಪ್ಪ, ಸ್ವಾಮಿ, ತಿಪ್ಪೇಶ್, ರಾಜು, ಬಸವರಾಜು, ರಘು, ನಿಂಗಪ್ಪ, ರಮೇಶ್, ಮಂಜುನಾಥ, ಅಂಜನಿ ಮತ್ತಿತರರು ಇದ್ದರು.11ಕೆಕೆಡಿಯು1 ವಿದ್ಯಾರ್ಥಿನಿ ಸಾವಿನ ಹಿನ್ನಲೆಯಲ್ಲಿ.ಕಡೂರು ಪ್ರವಾಸಿ ಮಂದಿರದಲ್ಲಿ ಮಡಿವಾಳ ಸಮಾಜದ ಮುಖಂಡರು ಸುದ್ದಿಗೋಷ್ಟಿ ನಡೆಸಿದರು.