ಉಡುಪಿ: ಅಜ್ಜರಕಾಡುನಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ 5 ವರ್ಷ ಕಳೆದಿದ್ದರೂ ಸರ್ಕಾರದ ನಿರ್ಲಕ್ಷದಿಂದ ಇನ್ನೂ ಉದ್ಘಾಟನೆಗೊಂಡಿಲ್ಲ. ಇನ್ನು 25-20 ದಿನಗಳೊಳಗೆ ಅದರ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಿ ಬಡ ಜನರ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇನ್ನೂ ತಾಲೂಕ ಆಸ್ಪತ್ರೆಯ ಹಂತದಲ್ಲಿಯೇ ಇರುವ ಈಗಿನ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆ ದರ್ಜೆಗೇರಿಸಲು ಬಿಜೆಪಿ ಸರ್ಕಾರದ ಆಡಳಿತದಲ್ಲಿ 2021ರಿಂದ ನೂತನ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ. ಶೇ. 90ರಷ್ಟು ಕಾಮಗಾರಿ 3 ವರ್ಷಗಳ ಹಿಂದೆ ಪೂರ್ಣವಾಗಿದ್ದರೂ, ಅದನ್ನು ಜನರ ಬಳಕೆಗೆ ಮುಕ್ತ ಮಾಡುವ ಇಚ್ಛಾಶಕ್ತಿ ಈಗಿನ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದು ಅವರು ಆರೋಪಿಸಿದರು. ಉಡುಪಿ ಜಿಲ್ಲೆಗೆ 25 ವರ್ಷ ಕಳೆದರೂ ಇನ್ನೂ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ೧೨೦ ಹಾಸಿಗೆಗಳಿವೆ. ರೋಗಿಗಳು ಹಾಸಿಗೆಗಾಗಿ, ಐಸಿಯುಗಾಗಿ ಕಾಯುವ ಪರಿಸ್ಥಿತಿ ಇದೆ. ಇನ್ನಾದರೂ ಜಿಲ್ಲಾ ಸರಕಾರಿ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ಅಗತ್ಯ ಉಪಕರಣ ಖರೀದಿಗೆ ಸೂಕ್ತ ಅನುದಾನ ಒದಗಿಸಬೇಕು. ವೈದ್ಯರು, ಸಿಬ್ಬಂದಿ ಹುದ್ದೆ ಭರ್ತಿಗೆ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕಲ್ಯಾ ದಿವಾಕರ ಶೆಟ್ಟಿ, ಕಾರ್‍ಯದರ್ಶಿ ಶ್ರೀನಿ ಹೆಗ್ಡೆ, ಕಚೇರಿ ಕಾರ್‍ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.