ಬೆಳೆ ವಿಮೆ ಶೀಘ್ರ ಪಾವತಿಯಾಗದಿದ್ದರೆ ರೈತರಿಂದ ಉಗ್ರ ಪ್ರತಿಭಟನೆ

KannadaprabhaNewsNetwork |  
Published : Apr 08, 2026, 03:45 AM IST
ಕಿಶೋರ್ ಶಿರಾಡಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ರೈತರಿಗೆ ಬೆಳೆ ವಿಮೆ ದೊರಕದೆ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ರೈತರು ಕಟ್ಟಿದ ವಿಮಾ ತೆರಿಗೆಯನ್ನು ರೈತರಿಗೆ ನೀಡಬೇಕು. ಮುಂದಿನ 15 ದಿನದೊಳಗೆ ಬೆಳೆ ವಿಮೆ ರೈತರಿಗೆ ಪಾವತಿಯಾಗದಿದ್ದರೆ ರೈತರೆಲ್ಲರೂ ಸೇರಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.

ಸುಬ್ರಹ್ಮಣ್ಯ: ರೈತರಿಗೆ ಬೆಳೆ ವಿಮೆ ದೊರಕದೆ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ರೈತರು ಕಟ್ಟಿದ ವಿಮಾ ತೆರಿಗೆಯನ್ನು ರೈತರಿಗೆ ನೀಡಬೇಕು. ಮುಂದಿನ 15 ದಿನದೊಳಗೆ ಬೆಳೆ ವಿಮೆ ರೈತರಿಗೆ ಪಾವತಿಯಾಗದಿದ್ದರೆ ರೈತರೆಲ್ಲರೂ ಸೇರಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.ಸುಬ್ರಹ್ಮಣ್ಯದಲ್ಲಿ ಬುಧವಾರ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ನಡೆದ ರೈತರ ಸಭೆ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪ್ರಕೃತಿ ವಿಕೋಪದಿಂದ ತೊಂದರೆಯಾದಾಗ ಸಾಲ ಮಾಡಿ ನಷ್ಟ ನೀಗಿಸುವ ಕಾರ್ಯವನ್ನು ರೈತರು ಮಾಡಿದ್ದಾರೆ. ಕೊಳೆರೋಗ, ಹಳದಿ ರೋಗಗಳಿಂದ ಕೃಷಿ ನಾಶವಾಗಿ ರೈತರು ಹೈರಾಣಾಗಿದ್ದಾರೆ. ಇದರಿಂದ ಕಾಲಕಾಲಕ್ಕೆ ಕಟ್ಟಬೇಕಾದ ಸಾಲ ಕಟ್ಟಲು ಆಗುತ್ತಿಲ್ಲ. ರೈತರ ಸಂಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಪಂದಿಸುವ ಮಾನವೀಯತೆಯನ್ನು ಅಧಿಕಾರಿಗಳು ಹೊಂದಿರದಿರುವುದು ದುಃಖಕರ ಎಂದು ಕಿಶೋರ್ ಹೇಳಿದರು.ಬೆಳೆ ವಿಮೆಯಲ್ಲಿ ರೈತರಿಗೆ ವಂಚನೆ ಮಾಡಲಾಗಿದೆ. ಅದು ಸಮರ್ಪಕವಾಗಿ ರೈತರ ಕೈಗೆ ತಲುಪುತ್ತಿಲ್ಲ. ಮಳೆಯಿಂದಾಗಿ ರೈತರಿಗೆ ತೊಂದರೆ ಆಗಿದ್ದರೂ ಯಾವುದೇ ರೀತಿಯ ಪ್ರಕೃತಿ ವಿಕೋಪ ಆಗಿಲ್ಲ ಎಂದು ನಾವು ವರದಿ ಕೇಳಿದಾಗ ಅಧಿಕಾರಿಗಳು ತಿಳಿಸಿರುವುದು ಶೋಚನೀಯ ಎಂದು ಕಿಶೋರ್ ನುಡಿದರು.ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ, ಡಿಸಿಸಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ಮಾಡಿ ಪ್ರಕೃತಿ ವಿಕೋಪದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಪ್ರಕೃತಿ ವಿಕೋಪ ನಿರ್ವಹಣಾ ತಂಡದಿಂದ ವರದಿ ಪಡೆಯುತ್ತಾರೆ. ಈ ತಂಡ ಜಿಲ್ಲಾಧಿಕಾರಿಗಳಿಗೆ ಸಮರ್ಪಕವಾಗಿ ವರದಿ ನೀಡಿರದೆ ಈ ಸಮಸ್ಯೆ ಉಂಟಾಗಿದೆ. ಆದುದರಿಂದ ಉನ್ನತ ಮಟ್ಟದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಗ್ರಾಮೀಣ ಭಾಗದ ಅಧಿಕಾರಿಗಳಾದ ಪಿಡಿಒ ಇತ್ಯಾದಿಗಳು ತಮ್ಮ ಭಾಗದ ಪ್ರಕೃತಿ ವಿಕೋಪದ ಬಗ್ಗೆ ಸೂಕ್ತ ಮಾಹಿತಿಯನ್ನು ಉನ್ನತ ಅಧಿಕಾರಿಗಳಿಗೆ ನೀಡಬೇಕು. ಆದರೆ ವರದಿ ನೀಡದೆ ಇರುವುದರಿಂದ ರೈತರಿಗೆ ಬೆಳೆ ವಿಮೆ ಬಂದಿಲ್ಲ. ಜಿಲ್ಲಾಡಳಿತ ರೈತರ ಬಗ್ಗೆ ನಿರ್ಲಕ್ಷ್ಯ ತೋರಿಸಬಾರದು. ರೈತರಿಗೆ ಸಹಾಯಹಸ್ತ ಚಾಚಬೇಕು. ಬೆವರು ಸುರಿಸಿ ಕೃಷಿ ಮಾಡಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ಬಂದ ರೈತನಿಗೆ ಅದರಲ್ಲೂ ವಿದ್ಯಾವಂತ ರೈತರಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಬೆಳೆ ವಿಮೆ ವರದಿಯನ್ನು ಸರ್ಕಾರಕ್ಕೆ ನೀಡಿಲ್ಲ. ಇದರಿಂದ ಸರ್ಕಾರದಿಂದ ವಿಮೆ ಮೊತ್ತ ಬಂದಿಲ್ಲ. ಹೀಗಾಗಿ ರೈತರಿಗೆ ಸಮಸ್ಯೆಯಾಗಿದೆ ಎಂದರು.ಕಳೆದ ವರ್ಷ ವಿಪರೀತ ಮಳೆಯಾಗಿದ್ದರೂ ಪ್ರಕೃತಿ ವಿಕೋಪವೇ ಆಗಿಲ್ಲ ಎಂಬ ವರದಿ ನೀಡಿರುವುದು ತಪ್ಪು. ಆದುದರಿಂದ ಜನಪ್ರತಿನಿಧಿಗಳು ತಕ್ಷಣ ಈ ಬಗ್ಗೆ ಕಾರ್ಯಪ್ರವೃತ್ತರಾಗಿ ರೈತರಿಗೆ ಬೆಳೆ ವಿಮೆ ದೊರಕಿಸಿ ಕೊಡಬೇಕು. ಶೀಘ್ರ ವಿಮೆ ಬಾರದೆ ಇದ್ದಲ್ಲಿ ರೈತರೆಲ್ಲರೂ ಸೇರಿ ವೇದಿಕೆ ವತಿಯಿಂದ ಉಗ್ರ ಹೋರಾಟ ಮಾಡುತ್ತೇನೆ ಎಂದು ಕಿಶೋರ್ ಶಿರಾಡಿ ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ರಮಾನಂದ ಎಣ್ಣೆಮಜಲು, ಅಶೋಕ್‌ ಕುಮಾರ್‌‌ ಮೂಲೆಮಜಲು, ಮಿಲನ್ ಮಾದಪ್ಪ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಕಳಕಳಿಯ ಕಾರಣಕ್ಕೆ ‘ಬಾಬೂಜಿ’ಯಾದ ಡಾ. ಬಾಬು ಜಗಜೀವನ್ ರಾಂ: ಪ್ರೊ. ಎಂ.ಡಿ.ಮಂಚಿ
ಉಡುಪಿ: 12 ರಂದು ಕಥಾಬಿಂದು ಸಾಹಿತ್ಯ ಸಮ್ಮೇಳನ