ಚೇನಂಡ ಹಾಕಿ ಉತ್ಸವದಲ್ಲಿ ಕಾಫಿ, ಜೇನು ಕೃಷಿ ಬಗ್ಗೆ ಉಪನ್ಯಾಸ

KannadaprabhaNewsNetwork |  
Published : Apr 08, 2026, 03:45 AM IST
ಚಿತ್ರ : 7ಎಂಡಿಕೆ4 : ಸುದ್ದಿಗೋಷ್ಠಿಯಲ್ಲಿ ಚೇನಂಡ ಕುಟುಂಬಸ್ಥರು ಮಾತನಾಡಿದರು.  | Kannada Prabha

ಸಾರಾಂಶ

ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಪಟ್ಟಣದಲ್ಲಿ ನಡೆಯುತ್ತಿರುವ ಕೌಟುಂಬಿಕ ಹಾಕಿ ಚೇನಂಡ ಕಪ್‌ನಲ್ಲಿ ಹಾಕಿಯ ಜೊತೆಗೆ ಕಾಫಿ ಮತ್ತು ಜೇನು ಕೃಷಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಹಾಕಿ ಉತ್ಸವಕ್ಕೆ ಮೆರುಗು ನೀಡಲಾಗುತ್ತಿದೆ ಎಂದು ಚೇನಂಡ ಕುಟುಂಬಸ್ಥರು ತಿಳಿಸಿದ್ದಾರೆ.

ಮಡಿಕೇರಿ: ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಪಟ್ಟಣದಲ್ಲಿ ನಡೆಯುತ್ತಿರುವ ಕೌಟುಂಬಿಕ ಹಾಕಿ ಚೇನಂಡ ಕಪ್‌ನಲ್ಲಿ ಹಾಕಿಯ ಜೊತೆಗೆ ಕಾಫಿ ಮತ್ತು ಜೇನು ಕೃಷಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಹಾಕಿ ಉತ್ಸವಕ್ಕೆ ಮೆರುಗು ನೀಡಲಾಗುತ್ತಿದೆ ಎಂದು ಚೇನಂಡ ಕುಟುಂಬಸ್ಥರು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಚೇನಂಡ ಹಾಕಿ ಉತ್ಸವದ ಕಾರ್ಯದರ್ಶಿ ಮಧು ಮಾದಯ್ಯ ಮಾತನಾಡಿ ಏಪ್ರಿಲ್ 12ರಂದು ಬೆಳಿಗ್ಗೆ 11 ಗಂಟೆಗೆ ಹಾಕಿ ನಡೆಯುತ್ತಿರುವ ನಾಪೋಕ್ಲುವಿನ ಚೆರಿಯಪರಂಬು ಕ್ರೀಡಾಂಗಣದಲ್ಲಿ ಕಾಫಿ ಕುರಿತು ವಿಶೇಷ ಉಪನ್ಯಾಸವು ಕಾಫಿ ಮಂಡಳಿ ಸಹಯೋಗದಲ್ಲಿ ನಡೆಯಲಿದೆ. ಏಪ್ರಿಲ್ 19ರಂದು ಬೆಳಿಗ್ಗೆ 11 ಗಂಟೆಗೆ ಜೇನು ಕೃಷಿಯ ಕುರಿತ ವಿಶೇಷ ಉಪನ್ಯಾಸವು ಅರಣ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆಯಲಿದೆ. ಈ ಎರಡೂ ಕಾರ್ಯಕ್ರಮಗಳು ಜಿಲ್ಲೆಯ ಬೆಳೆಗಾರರಿಗೆ ಉಪಯುಕ್ತವಾಗಲಿದ್ದು, ಆಸಕ್ತರು ಆಗಮಿಸಿ ಪಾಲ್ಗೊಳ್ಳಬಹುದಾಗಿದೆ ಎಂದು ವಿವರಿದರು. ಇದಲ್ಲದೆ ಹಾಕಿ ಉತ್ಸವದ ಅಂಗವಾಗಿ ಮೈದಾನದಲ್ಲಿ 100x4 ರಿಲೇ, ಕಕ್ಕಬೆಯಿಂದ ನಾಪೋಕ್ಲಿನ ವರೆಗೆ ಮ್ಯಾರಥಾನ್, ಆಕರ್ಷಕ ಶ್ವಾನಗಳ ಪ್ರದರ್ಶನ ಹಾಗೂ ಶಾಲಾ ಮಕ್ಕಳಿಗೆ ಕೊಡವ ಸಾಂಸ್ಕೃತಿಕ ನೃತ ಕಲಿಕಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು. ಈ ಹಾಕಿ ಉತ್ಸವಕ್ಕಾಗಿ ಎರಡು ವರ್ಷಗಳ ಹಿಂದೆಯೇ ಚೇನಂಡ ಕುಟುಂಬಸ್ಥರೆಲ್ಲ ಸೇರಿ ತೀರ್ಮಾನಿಸಿ ಮೂವರು ಮಹಿಳೆಯರು ಸೇರಿದಂತೆ 11 ಮಂದಿಯ ಸಮಿತಿ ರಚಿಸಲಾಗಿತ್ತು. ಸುಮಾರು ರು.2.50 ಕೋಟಿ ವೆಚ್ಚವಾಗುವ ಈ ಉತ್ಸವಕ್ಕೆ ಸರ್ಕಾರದಿಂದ ರು.1 ಕೋಟಿ ಬಿಡುಗಡೆ ಮಾಡಿಸಿಕೊಡುವ ಭರವಸೆಯನ್ನು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ನೀಡಿದ್ದಾರೆ ಎಂದು ತಿಳಿಸಿದರು. ಸಮಿತಿ ಸದಸ್ಯ ಅಜಿತ್‌ ‍ಪೂಣಚ್ಚ ಮಾತನಾಡಿ ಈಗಾಗಲೇ ಶಾಲಾ ಮಕ್ಕಳಿಗಾಗಿ ಹಾಕಿ ಪಂದ್ಯಾವಳಿ ನಡೆಸಲಾಗಿದೆ. ಅವರಲ್ಲಿ 30 ವಿದ್ಯಾರ್ಥಿಗಳನ್ನು ಯಾವುದೇ ಜಾತಿ ಬೇಧ ಇಲ್ಲದೇ ಆಯ್ಕೆ ಮಾಡಿ ಈಗ ನಾಪೋಕ್ಲುವಿನಲ್ಲಿ ಹಾಕಿ ತರಬೇತಿ ನೀಡಲಾಗುತ್ತಿದೆ. ಇವರಲ್ಲಿ ಅತ್ಯುತ್ತಮ 12 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಉತ್ತಮ ಗುಣಮಟ್ಟದ ಹಾಕಿ ಪರಿಕರಗಳನ್ನು ನೀಡಿ, ಕ್ರೀಡಾ ವಸತಿ ನಿಲಯಕ್ಕೆ ಸೇರಿಸಲಾಗುವುದು. ಇದರಿಂದ ಮತ್ತಷ್ಟು ಹಾಕಿ ಪಟುಗಳು ಉಗಮಕ್ಕೆ ಸಹಕಾರಿಯಾಗಲಿದೆ ಎಂದರು.

ಸಮಿತಿ ಸದಸ್ಯ ಸುರೇಶ್ ನಾಣಯ್ಯ ಮಾತನಾಡಿ, ಗೋಲಿಗೊಂದು ಗಿಡ ಯೋಜನೆಯಡಿ ಈಗಾಗಲೇ ಶೆಟ್ಟಿಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು 2,800 ಗಿಡಗಳನ್ನು ಕೊಡಗಿನ ವಿವಿಧ ಭಾಗಗಳಲ್ಲಿ ನೆಡಲಾಗಿದೆ. ಲಕ್ಷ್ಮಣತೀರ್ಥ ನದಿ ದಡದಲ್ಲಿ 500ಕ್ಕೂ ಅಧಿಕ ಗಿಡಗಳನ್ನು ನೆಡುವ ಯೋಜನೆಯಿದ್ದು, ಮಳೆಗಾಲದ ಸಂದರ್ಭ ಈ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಜೆಪ್ಪು ದೇವಯ್ಯ, ಗಿರೀಶ್ ಪೂಣಚ್ಚ ಭಾಗವಹಿಸಿದ್ದರು.ಚೇನಂಡ ಹಾಕಿ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕುಟುಂಬಸ್ಥರೆಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಹಲವು ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿದ್ದೇವೆ. ಹಾಕಿ ಮಾತ್ರವಲ್ಲದೆ ಕಾಫಿ, ಜೇನು ಕೃಷಿಯ ಬಗ್ಗೆ ಉಪನ್ಯಾಸ ನೀಡಲಾಗುವುದು. ಅಲ್ಲದೆ ಹಲವು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

-ಮಧು ಮಾದಯ್ಯ, ಕಾರ್ಯದರ್ಶಿ ಚೇನಂಡ ಹಾಕಿ ಉತ್ಸವ

ಶಾಲಾ ಮಕ್ಕಳಲ್ಲಿ ಹಾಕಿ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ ಸುಮಾರು 30 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗುತ್ತಿದೆ. ಅದರಲ್ಲಿ 12 ಮಂದಿಯನ್ನು ವಿವಿಧ ಕ್ರೀಡಾ ವಸತಿ ನಿಲಯಗಳಿಗೆ ದಾಖಲಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.

-ಅಜಿತ್‌ ‍ಪೂಣಚ್ಚ, ಸದಸ್ಯ ಚೇನಂಡ ಹಾಕಿ ಉತ್ಸವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಕಳಕಳಿಯ ಕಾರಣಕ್ಕೆ ‘ಬಾಬೂಜಿ’ಯಾದ ಡಾ. ಬಾಬು ಜಗಜೀವನ್ ರಾಂ: ಪ್ರೊ. ಎಂ.ಡಿ.ಮಂಚಿ
ಉಡುಪಿ: 12 ರಂದು ಕಥಾಬಿಂದು ಸಾಹಿತ್ಯ ಸಮ್ಮೇಳನ