- ನಾಡಗೀತೆಗೆ ನೂರರ ಸಂಭ್ರಮದಲ್ಲಿ ನೂರು ಸ್ವರಗಳ ಸಂಗಮ ಮತ್ತು ಕುವೆಂಪು ಕಾವ್ಯ ಗಾಯನ
ಮತೀಯ ದೃಷ್ಟಿಯನ್ನು ಮೀರಿ ದರ್ಶನ ದೃಷ್ಟಿಯನ್ನು ಹೊಂದಿದ್ದ ಕಾರಣಕ್ಕಾಗಿಯೇ ಕವಿ ಕುವೆಂಪು ಅವರು ವಿಶ್ವ ಮಾನವ ಎನಿಸಿದರು ಎಂದು ನಗರದ ಬಸವ ತತ್ತ್ವ ಪೀಠಾಧೀಶ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು. ನಗರದ ಎಂ.ಇ.ಎಸ್. ಕಾಲೇಜು ಆವರಣದಲ್ಲಿ ಭಾನುವಾರ ಸಂಜೆ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಲಯನ್ಸ್ ಸಂಸ್ಥೆ, ಕಲಾ ಸೇವಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಲೆನಾಡು ವಿದ್ಯಾಸಂಸ್ಥೆ ಹಾಗೂ ಕಲ್ಕಟ್ಟೆ ಪುಸ್ತಕದ ಮನೆಯ ಸಹಯೋಗದಲ್ಲಿ ಪೂರ್ವಿ ಗಾನ ಯಾನ 116 ರ ಸರಣಿಯಲ್ಲಿ ಆಯೋಜಿಸಿದ್ದ ನಾಡಗೀತೆಗೆ ನೂರರ ಸಂಭ್ರಮದಲ್ಲಿ ನೂರು ಸ್ವರಗಳ ಸಂಗಮ ಮತ್ತು ಕುವೆಂಪು ಕಾವ್ಯ ಗಾಯನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.ಕೃಷ್ಣನಿಂದ ಹಿಡಿದು ಕ್ರಿಸ್ತನವರೆಗೆ ಮಾನವ ಕುಲಕ್ಕೆ ಒಳಿತನ್ನು ಬಯಸಿ ಯಾರೆಲ್ಲ ಅವತರಿಸಿದರೋ ಅವರೆಲ್ಲರೂ ಸಹ ಜನರ ಹೃದಯವನ್ನು ಶುದ್ಧೀಕರಿಸಲು ಪ್ರಯತ್ನಿಸಿದ್ದರು. ಕುವೆಂಪು ಅವರ ಕೃತಿಯಲ್ಲಿ ಈ ವಿಚಾರಗಳು ಕಂಡು ಬರುತ್ತವೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ನಾಡಗೀತೆಯನ್ನು ಕುವೆಂಪು ಬರೆದಿದ್ದರು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ನಾಡಗೀತೆಯನ್ನು ಕುವೆಂಪು ಅವರು ರಚಿಸಿ ನೂರು ವರ್ಷಗಳಾಗಿವೆ. ನಮ್ಮ ಕಲೆ, ಸಂಸ್ಕೃತಿ ಬಿಂಬಿಸುವ ಸಂಗೀತ ಮನರಂಜನೆ ಮಾತ್ರವಲ್ಲ, ಸಂಸ್ಕಾರ ನೀಡುತ್ತದೆ. ಉದ್ವೇಗ, ಖಿನ್ನತೆ, ದುಃಖದ ಸನ್ನಿವೇಶಗಳಲ್ಲಿ ಮನಸ್ಸಿಗೆ ಹಿತ ನೀಡುವ ಮಾಧ್ಯಮ. ಸಂಗೀತವನ್ನು ಬಯಸದಿರುವವರೂ ಯಾರೂ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ನಮ್ಮ ನಾಡಿನ ಮಹತ್ವ ಸಾರುವ ಅರ್ಥವತ್ತಾದ ನಾಡಗೀತೆಯನ್ನು ರಾಷ್ಟ್ರಕವಿ ಕುವೆಂಪು ಅವರು ರಚಿಸಿ 100 ವರ್ಷಗಳು ಕಳೆದಿವೆ ಎನ್ನುವುದೇ ಒಂದು ಹೆಮ್ಮೆಯ ಸಂಗತಿ. ಈ ಸಂದರ್ಭದಲ್ಲಿ ನಾಡಗೀತೆ ಶತಕಂಠ ಗಾಯನವನ್ನು ಸಂಯೋಜಿಸಿ ಅದನ್ನು ಆಸ್ವಾದಿಸಲು ಎಂ.ಎಸ್.ಸುಧೀರ್ ಅವಕಾಶ ಕಲ್ಪಿಸಿದ್ದಾರೆ ಎಂದರು.ಕನ್ನಡ ಸಾಹಿತ್ಯ ಪರಿಷತ್‌ನ ಚಿಕ್ಕಮಗಳೂರು ನಗರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ರೂಪಾ ನಾಯ್ಕ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.ಭರತ ಕಲಾ ಕ್ಷೇತ್ರದ ಗುರು ವೀಣಾ ಅರವಿಂದ್ ಮಾತನಾಡಿದರು. ಎಂ.ಎಸ್.ಸುಧೀರ್ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದ ರೂಪಾ ನಾಯ್ಕ್ ವಂದಿಸಿದರು. ಲಯನ್ಸ್ ಸಂಸ್ಥೆ ರತ್ನಾಕರ್ ಕಾರ್ಯಕ್ರಮದಲ್ಲಿದ್ದರು. ನಗರದ 14 ಸಂಗೀತ ಶಾಲೆಗಳ ಗುರು-ಶಿಷ್ಯರ ಶತಕಂಠ ಗಾಯನದಲ್ಲಿ ನಾಡಗೀತೆ ಹಾಗೂ ಕುವೆಂಪು ವಿರಚಿತ ಗೀತೆಗಳು ಗಮನ ಸೆಳೆದವು. ಅನಂತರ ಎಂ.ಎಸ್.ಸುಧೀರ್ ಸಂಗೀತ ಸಮನ್ವಯ ಹಾಗೂ ಗಾಯನ ಸಾರಥ್ಯದಲ್ಲಿ ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ, ಚೇತನ್‌ರಾಮ್, ಡಿ.ಸುರೇಂದ್ರ ನಾಯ್ಕ್, ರೂಪ ಅಶ್ವಿನ್, ಜ್ಯೋತಿ ವಿನೀತ್, ಅನುಷಾ, ರುಕ್ಸಾನಾ ಕಾಚೂರ್, ಮೇಘ, ಪೃಥ್ವಿಶ್ರೀ ಇವರು ಕುವೆಂಪು ಕಾವ್ಯ ಗಾಯನದಲ್ಲಿ ವಿವಿಧ ಗೀತೆಗಳಿಗೆ ಧ್ವನಿಯಾಗಿ ರಂಜಿಸಿದರು.
19 ಕೆಸಿಕೆಎಂ 1ಚಿಕ್ಕಮಗಳೂರಿನ ಎಂಇಎಸ್ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ನಾಡಗೀತೆಗೆ ನೂರರ ಸಂಭ್ರಮದಲ್ಲಿ ನೂರು ಸ್ವರಗಳ ಸಂಗಮ ಮತ್ತು ಕುವೆಂಪು ಕಾವ್ಯ ಗಾಯನ ಕಾರ್ಯಕ್ರಮವನ್ನು ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯಕುಮಾರ್ ಉದ್ಘಾಟಿಸಿದರು.