ಪ್ರಖರ ವೈಚಾರಿಕತೆಯ ದಾರ್ಶನಿಕ ಕವಿ ಕುವೆಂಪು: ಡಾ.ಮಾಳಿ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ರಾಷ್ಟ್ರಕವಿ ಕುವೆಂಪುರವರ 120ನೇ ಜನ್ಮದಿನಾಚರಣೆಯಲ್ಲಿ ಡಾ.ವಿ.ಎಸ್.ಮಾಳಿ ಅಭಿಪ್ರಾಯ ವ್ಯಕ್ತಪಡಿಸಿ, ಮೌಢ್ಯ, ಮತಾಚಾರಗಳಿಂದ ಹೊರಬರಬೇಕೆಂಬ ಸಂದೇಶ ಸಾರಿದ ಕುವೆಂಪುನವರು ಪ್ರಖರ ವೈಚಾರಿಕತೆಯ ದಾರ್ಶನಿಕ ಕವಿಯಾಗಿದ್ದರು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಮೌಢ್ಯ, ಮತಾಚಾರಗಳಿಂದ ಹೊರಬರಬೇಕೆಂಬ ಸಂದೇಶ ಸಾರಿದ ಕುವೆಂಪುನವರು ಪ್ರಖರ ವೈಚಾರಿಕತೆಯ ದಾರ್ಶನಿಕ ಕವಿಯಾಗಿದ್ದರು ಎಂದು ಡಾ.ವಿ.ಎಸ್.ಮಾಳಿ ಹೇಳಿದರು.

ತಾಲೂಕಿನ ಅಂಕಲಗಿಯಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿ ಹಾಗೂ ಕೆ.ಜೆ.ಎಸ್ ಸಂಘದ ಅಡವಿಸಿದ್ಧೇಶ್ವರ ಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪುರವರ 120ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕುವೆಂಪು ಮತ್ತು ಕಟ್ಟೀಮನಿ ಸಾಹಿತ್ಯದಲ್ಲಿ ವೈಚಾರಿಕತೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸಮಾಜ ಭೀತಿಯಿಂದಲೂ, ಪ್ರಭುತ್ವ ಭಯದಿಂದಲೂ, ಸ್ವರ್ಗ, ನರಕ ದೇವಾನುದೇವತೆಗಳ ಮೋಹಮಾಯೆಯಿಂದಲೂ ಸತ್ವರಹಿತವಾಗಿದೆ. ಇಂಥ ಭೀತಿಗಳಿಂದ ಹೊರಬಂದು ವೈಚಾರಿಕತೆಯ ಮತ್ತು ವೈಜ್ಞಾನಿಕತೆಯ ತಳಹದಿಯ ಬದುಕನ್ನು ಕಟ್ಟಿಕೊಳ್ಳಬೇಕು ಅಂದಾಗ ಮಾತ್ರ ಸ್ವಾಸ್ಥ್ಯ ಸಮಾಜವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಎಂಬುವುದನ್ನು ಕುವೆಂಪು ಮತ್ತು ಕಟ್ಟೀಮನಿಯವರ ಸಾಹಿತ್ಯ ಕೃತಿಗಳಿಂದ ನಾವು ಅರಿತುಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯ ಸಂಚಾಲಕರು ಹಿರಿಯ ಸಾಹಿತಿಗಳಾದ ಪ್ರೊ.ಚಂದ್ರಶೇಖರ ಅಕ್ಕಿಯವರು ಮಾತನಾಡಿ, ಕುವೆಂಪುರವರ 120ನೇ ಜನ್ಮದಿನಾಚರಣೆಯನ್ನು ಬಸವರಾಜ ಕಟ್ಟೀಮನಿಯವರು ಹುಟ್ಟಿ ಬೆಳೆದ ಕುಂದರನಾಡಿನ ಅಂಕಲಗಿಯಲ್ಲಿ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಕುವೆಂಪು ಮತ್ತು ಬಸವರಾಜ ಕಟ್ಟೀಮನಿ ಅವರ ಸಾಹಿತ್ಯದ ಒಡನಾಟದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಸವರಾಜ ಕಟ್ಟೀಮನಿ ಪತಿಷ್ಠಾನದ ಸದಸ್ಯರಾದ ಡಾ.ಬಾಳಾಸಾಹೇಬ ಲೋಕಾಪೂರ, ಪ್ರೊ.ಸುರೇಶ ಮುದ್ದಾರ, ಕೆ.ಜೆ.ಎಸ್ ಸಂಘದ ನಿರ್ದೇಶಕರಾದ ಬಾಳಗೌಡ ಪಾಟೀಲ, ಎಲ್.ಕೆ.ಪೂಜೇರಿ, ಬಿ.ಎಸ್.ತೋಳಿ ಗೋಕಾಕದ ಹಿರಿಯ ಜಾನಪದ ರಂಗ ಕಲಾವಿದರು ಸಾಹಿತಿಗಳಾದ ಈಶ್ವರಚಂದ್ರ ಬೆಟಗೇರಿ, ಶಾಲಾ ಶಿಕ್ಷಣ ಇಲಾಖೆ ಚಿಕ್ಕೋಡಿಯ ಉಪನಿರ್ದೇಶಕರ ಕಚೇರಿಯ ಕನ್ನಡ ವಿಷಯ ಪರಿವೀಕ್ಷರಾದ ಅರಿಹಂತ ಬಿರಾದಾರ ಪಾಟೀಲ, ರಾಯನಗೌಡ ಪಾಟೀಲ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರೊ.ಪಿ.ಎ ಕುರುಪಿ ನಿರೂಪಿಸಿದರು. ಪ್ರೊ.ಎಂ ಎಂ ನರಸಿಂಗೋಳ ಸ್ವಾಗತಿಸಿದರು. ಪ್ರೊ.ಐ.ಐ.ಪರಮಾಜ ವಂದಿಸಿದರು.

Share this article