‘ಆರ್ಥಿಕ ತಜ್ಞ’ ಸಿದ್ದುಗೆ ಸಲಹೆಗಾರರು: ಎಚ್‌ಡಿಕೆ ವ್ಯಂಗ್ಯ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಸಿದ್ದರಾಮಯ್ಯ ವಿಶ್ವ ವಿಖ್ಯಾತ ಆರ್ಥಿಕ ತಜ್ಞರು. ಹಣಕಾಸು ಸಚಿವರಾಗಿ, ಅನೇಕ ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿದವರು ಮತ್ತು ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕರಾಗಿದ್ದವರು. ಅವರು ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿರುವುದು ಅಚ್ಚರಿಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಟಕಿಯಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು14 ಬಾರಿ ದಾಖಲೆಯ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿದ್ದು, ಅವರಿಗೆ ಹ್ಯಾಟ್ಸಾಫ್‌ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿಶ್ವ ವಿಖ್ಯಾತ ಆರ್ಥಿಕ ತಜ್ಞರು. ಹಣಕಾಸು ಸಚಿವರಾಗಿ ಅನೇಕ ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿದವರು ಮತ್ತು ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕರಾಗಿದ್ದವರು. ಅವರು ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿರುವುದು ಅಚ್ಚರಿಯಾಗುತ್ತಿದೆ ಎಂದರು.

ರೈತರಿಗೆ ಬರ ಪರಿಹಾರ ನೀಡುವಲ್ಲಿ ಕಾಂಗ್ರೆಸ್‌ ಸರ್ಕಾರ ಮೀನಮೇಷ ಎಣಿಸುತ್ತಿದೆ. ಆದರೆ, ರಾಜಕೀಯ ಗಂಜಿಕೇಂದ್ರಗಳನ್ನು ಯಥೇಚ್ಛವಾಗಿ ಸೃಷ್ಟಿ ಮಾಡುತ್ತಿದೆ. ಸರ್ಕಾರ ರೈತರನ್ನು ಬಹಳ ಕೇವಲವಾಗಿ ನಡೆಸಿಕೊಳ್ಳುತ್ತಿದೆ. ಆದರೆ, ಅಧಿಕಾರನ್ನು ಭರ್ಜರಿಯಾಗಿ ಅನುಭವಿಸುತ್ತಿದೆ. ಸಲಹೆಗಾರರು, ಆರ್ಥಿಕ ಸಲಹೆಗಾರರು ಸೇರಿದಂತೆ ವಿವಿಧ ಜನರಿಗೆ ಸಂಪುಟ ದರ್ಜೆ ನೀಡಿದ್ದಾರೆ. ಹೀಗೆ ಸುತ್ತಲೂ ಸಲಹೆಗಾರರು, ಕಾರ್ಯದರ್ಶಿಗಳನ್ನು ಇಟ್ಟುಕೊಂಡು ಜನರ ತೆರಿಗೆ ದುಡ್ಡಿನಲ್ಲಿ ಗೂಟದ ಕಾರು, ಸರ್ಕಾರಿ ಕಚೇರಿ, ಸಿಬ್ಬಂದಿ ನೀಡಿದ್ದಾರೆ ಎಂದು ಕಿಡಿಕಾರಿದರು.

ಈ ಹಿಂದೆ ಹಾರನಹಳ್ಳಿ ರಾಮಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ವಿಜಯಭಾಸ್ಕರ್ ಅವರು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿ ಆಡಳಿತ ಸುಧಾರಣೆಗೆ ತಲಾ ಒಂದೊಂದು ವರದಿ ನೀಡಿದ್ದಾರೆ. ಆ ವರದಿಗಳು ಏನಾಗಿವೆ? ಆ ವರದಿಗಳ ಸಲಹೆ ಸ್ವೀಕಾರ ಮಾಡಿ ಎಷ್ಟು ಆಡಳಿತ ಸುಧಾರಣೆ ಮಾಡಲಾಗಿದೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಡಿಸಿಎಂ ಗುಂಗಿನಲ್ಲಿ ಮೂವರು: ರಾಜ್ಯದಲ್ಲಿ ಇಂತಹ ಭೀಕರ ಬರದ ಪರಿಸ್ಥಿತಿ ಇದ್ದರೂ ಇವರ ಮೋಜು ಮಸ್ತಿ ಏನು ಕಡಿಮೆ ಆಗಿಲ್ಲ. ಈಗಾಗಲೇ ರೈತರ ಆತ್ಮಹತ್ಯೆಗಳು ಆರಂಭವಾಗಿದೆ. ಬೆಳೆ ಉಳಿಸಿಕೊಳ್ಳಲು ನಾರಾಯಣಪುರ ಡ್ಯಾಮ್ ಬಳಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯದ ಚಿಂತೆಯಾಗಿದೆ, ಮೂವರು ಉಪಮುಖ್ಯಮಂತ್ರಿಗಳಾಗುವ ಗುಂಗಿನಲ್ಲಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಪರಿಹಾರ ಕೊಡಲು ಮೀನಮೇಷ: ಫ್ರೂಟ್ ತಂತ್ರಾಂಶದ ಮೂಲಕ ರೈತರಿಗೆ 2 ಸಾವಿರ ರು. ಪರಿಹಾರ ಕೊಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಅದರೆ ಇಲ್ಲಿಯವರೆಗೆ ರೈತರಿಗೆ ಬಿಡಿಗಾಸನ್ನೂ ಕೊಟ್ಟಿಲ್ಲ. ಇದು ಸರ್ಕಾರದ 7 ತಿಂಗಳ ಸಾಧನೆ. ನುಡಿದಂತೆ ನಡೆಯುವುದು ಎಂದರೆ ಹೀಗೇನಾ ಎಂದು ಟೀಕಾಪ್ರಹಾರ ನಡೆಸಿದರು.ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಹಿರಿಯ ಮುಖಂಡ ಕೆ.ಟಿ.ಶಾಂತಕುಮಾರ್ ಉಪಸ್ಥಿರಿದ್ದರು.

Share this article