ಕುವೆಂಪು 20ನೇ ಶತಮಾನದ ರಸಕವಿ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಕುಪ್ಪಳ್ಳಿ ಎನ್ನುವ ಚಿಕ್ಕಗ್ರಾಮದಲ್ಲಿ ಜನಿಸಿ, ವಿಶ್ವಕ್ಕೆ ಮಾನ್ಯವಾದ ಸಂದೇಶವನ್ನು ಕೊಟ್ಟ ಕನ್ನಡ ನಾಡಿನ ಹಿರಿಯ ಕವಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟರು.

ಹೊಸಪೇಟೆ: ಮನುಷ್ಯ ಹುಟ್ಟುತ್ತ ವಿಶ್ವಮಾನವನಾಗಿದ್ದು, ಜಾತಿ, ಮತ, ಧರ್ಮಗಳ ಕಟ್ಟುಪಾಡಿಗೆ ಸಿಲುಕಿ, ಮೂಢನಂಬಿಕೆ ಮತ್ತು ಮೌಢ್ಯಗಳ ಜಾಡಿನಲ್ಲಿ ಬೆಳೆಯುತ್ತಾ ಅಲ್ಪಮಾನವರಾಗಿದ್ದೇವೆ ಎಂದು ಪ್ರೊ. ಯು. ರಾಘವೇಂದ್ರರಾವ್ ತಿಳಿಸಿದರು.

ಸ್ಥಳೀಯ ಚೇತನ ಸಾಹಿತ್ಯ ಸಂಸ್ಥೆ ಮತ್ತು ವಿಜಯನಗರ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕದ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು 120ನೇ ಜನ್ಮದಿನದ ಅಂಗವಾಗಿ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಕುಪ್ಪಳ್ಳಿ ಎನ್ನುವ ಚಿಕ್ಕಗ್ರಾಮದಲ್ಲಿ ಜನಿಸಿ, ವಿಶ್ವಕ್ಕೆ ಮಾನ್ಯವಾದ ಸಂದೇಶವನ್ನು ಕೊಟ್ಟ ಕನ್ನಡ ನಾಡಿನ ಹಿರಿಯ ಕವಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟರು. ಅವರು ಇಪ್ಪತ್ತನೇ ಶತಮಾನದ ರಸಕವಿ ಎನಿಸಿದ್ದಾರೆ. ಹಾಗೆಯೇ ಹತ್ತನೇ ಶತಮಾನದಲ್ಲಿ ಅದಿಕವಿ ಪಂಪ ಸುವರ್ಣಯುಗವನ್ನು ಸ್ಥಾಪಿಸಿದ್ದರು ಎಂದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಪ್ರಸಾರಾಂಗದ ನಿರ್ದೇಶಕ ಡಾ. ಬಿ.ಜಿ. ಕನಕೇಶಮೂರ್ತಿ ಮಾತನಾಡಿ, ಕುವೆಂಪು ಅವರ ಮೇರು ವ್ಯಕ್ತಿತ್ವ ತಿಳಿದುಕೊಳ್ಳಲು ಒಂದು ತಾಸು, ಒಂದು ದಿನ ಅಥವಾ ಒಂದು ತಿಂಗಳು ಸಾಕಾಗುವುದಿಲ್ಲ. ಒಂದು ಪುಸ್ತಕದ ಬಗ್ಗೆ ಅರಿತುಕೊಳ್ಳಲು ಕನಿಷ್ಠ ಒಂದು ವಾರವಾದರೂ ಬೇಕಾಗಬಹುದು. ಆದರೆ ಕುವೆಂಪುರವರ ವಿಶ್ವಮಾನವ ಸಂದೇಶವನ್ನುಅತಿ ಸುಲಭವಾಗಿ ಅರಿತುಕೊಳ್ಳಬಹುದಾಗಿದೆ ಎಂದರು.

ಥಿಯೋಸಫಿಕಲ್ ಮಹಾವಿದ್ಯಾಲಯದ ಅಶೋಕ್‌ ಜೀರೆ ಉದ್ಘಾಟಿಸಿ ಮಾತನಾಡಿದರು. ವಿಜಯನಗರ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ನಿರಂಜನ್ ಎಚ್.ಎಂ., ವಿಜಯನಗರ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಧುರಚನ್ನ ಶಾಸ್ತ್ರಿ ಹಿರೇಮಠ, ತಾಲೂಕು ಅಧ್ಯಕ್ಷ ಜಿ. ಯರಿಸ್ವಾಮಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ. ವೆಂಕಟೇಶ್, ಥಿಯೋಸಾಫಿಕಲ್‌ ಕಾಲೇಜಿನ ಪ್ರಾಧ್ಯಾಪಕ ಕೊಟ್ರೇಶ್ ಬಾಬು ಉಪಸ್ಥಿತರಿದ್ದರು. ಹಿರಿಯರಾದ ಡಾ. ಚನ್ನಪ್ಪಕಿಚಿಡಿ, ಗುಜ್ಜಲ್‌ ಗಣೇಶ್, ಗಂಟಿ ಸೋಮಶೇಖರ್, ವಿಶ್ವನಾಥ ಕವಿತಾಳ, ಕೆ.ಬಿ. ಶಿವಶಂಕರಗೌಡ, ವಕೀಲ ವೆಂಕಟೇಶ್, ಚಂದ್ರಶೇಖರ ರೋಣದಮಠ, ವೈ. ಯಮುನಪ್ಪ, ಕಂಡಕ್ಟರ್ ಪಂಪಾಪತಿ, ಗುಜ್ಜಲ್‌ರಾಜ, ಕಿಚಿಡಿ ವಿಶ್ವನಾಥ, ಪ.ಯ. ಗಣೇಶ್, ನಿವೃತ್ತ ಪೊಲೀಸ್‌ ಅಧಿಕಾರಿ ಲಕ್ಷ್ಮೀ ನಾರಾಯಣ ಕಾರ್ಯಕ್ರಮದಲ್ಲಿದ್ದರು. ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಎನ್. ನಾಗರಾಜ ಸ್ವಾಗತಿಸಿ, ವಂದಿಸಿ ನಿರೂಪಿಸಿದರು.

ವಿಶ್ವಮಾನವ ದಿನಾಚರಣೆಯ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಲಿಖಿತರಸ ಪ್ರಶ್ನೆ ಸ್ಪರ್ಧೆಯಲ್ಲಿ ಥಿಯೋಸಾಫಿಕಲ್ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಎಸ್. ಕಾಮಾಕ್ಷಿ ಪ್ರಥಮ, ಕೃಷ್ಣವೇಣಿ ಮತ್ತು ಸಿ. ದಾನಮ್ಮ ದ್ವಿತೀಯ, ಎಸ್. ಭೂಮಿಕ ಮತ್ತು ಚೈತ್ರಾಬಾಯಿ ತೃತೀಯ ಬಹುಮಾನ ಪಡೆದುಕೊಂಡರು.

ರೀನಾ ನಂದನ್‌ ಕುವೆಂಪುರವರ ಭಾವಗೀತೆಗಳನ್ನು ಪ್ರಸ್ತುತಪಡಿಸಿದರೆ, ಅಂಜಲಿ ಭರತ ನಾಟ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಕುವೆಂಪು ಅವರ ಗೀತೆಗಳಿಗೆ ನೃತ್ಯರೂಪಕಗಳನ್ನು ನೆರವೇರಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಜಂಬುನಾಥ ಎಚ್.ಎಂ. ಸಾಹಿತ್ಯ ರಚನೆಯಲ್ಲಿ ಮೂಡಿ ಬಂದ; ಚಂದ್ರನೊಬ್ಬನೇ ಶ್ಯಾಮ ಮತ್ತು ಜಿ. ಯರಿಸ್ವಾಮಿ ಸಾಹಿತ್ಯ ರಚನೆಯಲ್ಲಿ ಮೂಡಿ ಬಂದ ಅವ್ವ ಭಾವಗೀತೆಗಳನ್ನು ಅನಾವರಣಗೊಳಿಸಲಾಯಿತು.

Share this article