ಕನ್ನಡಪ್ರಭ ವಾರ್ತೆ ಹಿರಿಯೂರು
ಕುವೆಂಪುರವರು ಕಂಡ ಕನಸು ಅಖಂಡವಾದುದ್ದು. ಅವರು ಕನ್ನಡ ನಾಡಿನ ಬಹು ದೊಡ್ಡ ಆಸ್ತಿ ಎಂದು ತಹಸೀಲ್ದಾರ್ ಎಂ.ಸಿದ್ದೇಶ್ ಅಭಿಪ್ರಾಯಪಟ್ಟರು.ತಾಲೂಕಿನ ಯರಬಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಐಮಂಗಲ ಹೋಬಳಿ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಐಮಂಗಲ ಹೋಬಳಿಯ ನೂತನ ಅಧ್ಯಕ್ಷರ ಪದಗ್ರಹಣ, ಕುವೆಂಪು ವಿರಚಿತ ನಾಡಗೀತೆಗೆ ಶತಮಾನೋತ್ಸವ ಸಂಭ್ರಮ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಹೆಸರು ಕನ್ನಡ ನಾಡಿನಲ್ಲಲ್ಲದೆ ಭಾರತದ ಉದ್ದಗಲಕ್ಕೂ ಚಿರಪರಿಚಿತವಾಗಿದೆ. ಅವರ ಚಿಂತನೆಗಳು ನಾಡು-ನುಡಿಯ ಏಳಿಗೆಯಲ್ಲಿ ಸದಾ ಒತ್ತಾಸೆಯಾಗಿ ನಿಂತಿವೆ ಎಂದರು.ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, ಮನುಷ್ಯ ಕುಬ್ಜನಾಗದೆ ವಿಶ್ವ ಮಾನವನಾಗಬೇಕು. ತಪ್ಪು ಮಾಡುವುದು ಸಹಜ. ಆದರೆ ಮನಸ್ಸನ್ನು ಪರಿವರ್ತನೆ ಮಾಡಿಕೊಂಡು ಉತ್ತಮ ವ್ಯಕ್ತಿತ್ವ ರೂಡಿಸಿಕೊಳ್ಳಬೇಕು.
ಕುವೆಂಪು ಅವರು ನಾಡು-ನುಡಿ ಹಾಗೂ ಗಡಿಯ ವಿಷಯ ಬಂದಾಗ ಎಂದೂ ಸುಮ್ಮನಿದ್ದವರಲ್ಲ. ಅಖಂಡ ಕರ್ನಾಟಕ ಎಂಬ ತತ್ವ ಅವರಲ್ಲಿ ಸದಾ ಜಾಗೃತವಾಗಿತ್ತು. ಮಾನವನೊಬ್ಬನ ಬದುಕಿನ ಪ್ರತಿಯೊಂದು ಕ್ಷಣವು ಕನ್ನಡ ನಾಡಿನಲ್ಲಿಯೇ ಬೆಸೆದುಕೊಂಡಿದ್ದು ಕನ್ನಡ ನಾಡಿಗೆಂದೇ ಮನಸು ತುಡಿಯಬೇಕು ಎಂದರು.ವಿಶ್ರಾಂತ ಬಂಧಿಖಾನೆ ಅಧೀಕ್ಷಕ ಹರ್ತಿಕೋಟೆ ವೀರೇಂದ್ರ ಸಿಂಹ ಮಾತನಾಡಿ, ಕುವೆಂಪು ಅವರಿಗೆ ಕನ್ನಡ ಕರ್ನಾಟಕ ಮತ್ತು ಭಾರತ ಎಂಬುದು ಅಖಂಡ ಸಾಂಸ್ಕೃತಿಕ ನೆಲೆಯಾಗಿ ಕಾಣುತ್ತಿತ್ತು. ಈ ದೃಷ್ಟಿಕೋನದಲ್ಲಿ ನಾಡಗೀತೆ ರಚಿಸಿದರು. ಕನ್ನಡ ಭಾಷೆ ಹಾಗೂ ನುಡಿಯ ಬೆಳವಣಿಗೆಗಾಗಿ ಶ್ರಮಿಸಿದರು. ಅವರ ಕನ್ನಡಪರ ನಿಲುವು ಎಳೆ ಎಳೆಯಾಗಿ ಹಂತ ಹಂತವಾಗಿ ಮೇರು ಶಿಖರವಾಗಿ ಹೊರಹೊಮ್ಮಿತ್ತು ಎಂದರು.
ಈ ವೇಳೆ ಪ್ರಾಂಶುಪಾಲರಾದ ಧನಲಕ್ಷ್ಮಿ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಸಿ.ರಾಮಚಂದ್ರಪ್ಪ, ಕಸಾಪ ಜಿಲ್ಲಾ ಸಲಹಾ ಸಮಿತಿ ಸದಸ್ಯ ಹರ್ತಿ ಕೋಟೆ ಮಹಾಸ್ವಾಮಿ, ತಾಲೂಕು ಗೌರವ ಕಾರ್ಯದರ್ಶಿ ಜಯ ನಿಜಲಿಂಗಪ್ಪ, ಐಮಂಗಳ ಹೋಬಳಿ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಗೌರವ ಕಾರ್ಯದರ್ಶಿ ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕ ರಾಜಣ್ಣ, ಕವಿಗಳಾದ ಗೀತಾ ನಾಗಪ್ಪ, ಕರಿಓಬನಹಳ್ಳಿ ಪ್ರಹ್ಲಾದ್, ಶಫಿವುಲ್ಲಾ, ಸರಸ್ವತಿ, ಹೋಬಳಿ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ರತ್ನ ನಾಯಕಿ, ಮಲ್ಲಿಕಾರ್ಜುನಪ್ಪ, ಶಂಕರ್, ಮೋಹನ್ ಹಾಗೂ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.