ಕುವೆಂಪು ವಿಶ್ವಮಾನ್ಯರು: ಮಂತರ್ ಗೌಡ

KannadaprabhaNewsNetwork |  
Published : Oct 25, 2025, 01:02 AM IST
ಸೋಮವಾರಪೇಟೆ ಸಾಹಿತ್ಯ ಭವನ ಮುಂಭಾಗ ನಿರ್ಮಾಣವಾಗಿರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಯನ್ನು ಶಾಸಕ ಡಾ. ಮಂತರ್ ಗೌಡ ಅನಾವರಣಗೊಳಿಸಿದರು.  | Kannada Prabha

ಸಾರಾಂಶ

ರಾಷ್ಟ್ರಕವಿ ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ, ಸೋಮವಾರಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಸೋಮವಾರಪೇಟೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದ ಎದುರು ಕುವೆಂಪು ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಸೋ.ಪೇಟೆ: ಕುವೆಂಪು ಪ್ರತಿಮೆ ಅನಾವರಣಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ರಾಷ್ಟ್ರಕವಿ ಕುವೆಂಪು ಅವರು ಸತ್ಯ, ಸಾಮರಸ್ಯ ಹಾಗೂ ವಿಶ್ವಮಾನವ ಸಂದೇಶವನ್ನು ನಿರಂತರವಾಗಿ ಸಾರುವ ಮೂಲಕ ಸಮಾಜಕ್ಕೆ ಮಾದರಿಯಾಗುವ ಮೂಲಕ ವಿಶ್ವಮಾನ್ಯರಾದರು ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ರಾಷ್ಟ್ರಕವಿ ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ, ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಸೋಮವಾರಪೇಟೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದ ಎದುರು ಮೂರು ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಕುವೆಂಪು ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾಗಿದೆ. ಕನ್ನಡ ಮಣ್ಣಿನಲ್ಲಿ ಹುಟ್ಟಿದ ಎಲ್ಲರೂ ಮಾತೃಭಾಷೆ ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ಬೆಳೆಸಬೇಕು. ಕನ್ನಡವನ್ನು ಮಾತನಾಡುವ ಮೂಲಕ ಭಾಷೆಯನ್ನು ಬೆಳೆಸಬೇಕು. ಕನ್ನಡ ಸಾಹಿತ್ಯ ಪರಿಷತ್‌ನಿಂದ ಕನ್ನಡಪರ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.

ಸಾಹಿತ್ಯ ಪರಿಷತ್ ಕಟ್ಟಡಕ್ಕೆ 15 ಲಕ್ಷ ರು, ಶತಮಾನೋತ್ಸವ ಭವನಕ್ಕೆ 2.5 ಕೋಟಿ ರು. ಅನುದಾನ:

ಕನ್ನಡ ಸಾಹಿತ್ಯ ಭವನದ ಮೇಲಂತಸ್ತು ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ೧೫ ಲಕ್ಷ ರು.ಗಳ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದ ಶಾಸಕ ಮಂತರ್‌ ಗೌಡ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಶತಮಾನೋತ್ಸವ ಭವನದ ನಿರ್ಮಾಣದ ಕಾಮಗಾರಿ ಅನೇಕ ಕಾರಣಗಳಿಂದ ಸ್ಥಗಿತಗೊಂಡಿದ್ದು, ಕಾಮಗಾರಿಯನ್ನು ಮುಂದಿನ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು. ಕಾಮಗಾರಿಗೆ 2.5 ಕೋಟಿ ರು. ಅನುದಾನ ನೀಡುವುದಾಗಿ ಘೋಷಿಸಿದರು.

ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಬಸವಣ್ಣನವರ ತತ್ವ ಸಿದ್ಧಾಂತಗಳಿಗೂ ಕುವೆಂಪು ಅವರ ಚಿಂತನೆಗಳಿಗೂ ಸಾಮ್ಯತೆ ಇತ್ತು. ಇಬ್ಬರೂ ಜಾತ್ಯತೀತ ಹಾಗೂ ಧರ್ಮಾತೀತವಾಗಿ ಬದುಕುವ ಸಂದೇಶವನ್ನು ಸಾರುವ ಮೂಲಕ ವಿಶ್ವಮಾನವರಾದರು ಎಂದು ಬಣ್ಣಿಸಿದರು.ಐರಿಷ್‌ ಕವಿಯಿಂದಾಗಿ ಕನ್ನಡದಲ್ಲಿ ಬರೆದ ಕುವೆಂಪು:

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಪ್ಪಳ್ಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ಹಾಗೂ ಕುವೆಂಪುರವರ ಸಮೀಪ ಬಂಧು ಡಿ.ಎಂ.ಮನುದೇವ್ ದೇವಾಂಗಿ ಮಾತನಾಡಿ, ಕುವೆಂಪು ಅವರು ತಮ್ಮ ೨೦ನೇ ವಯಸ್ಸಿನಲ್ಲಿ ಇಂಗ್ಲಿಷ್‌ನಲ್ಲಿ ಕವನಗಳನ್ನು ಬರೆಯುತ್ತಿದ್ದರು. ಆ ಸಮಯದಲ್ಲಿ ಐರಿಷ್ ಕವಿ ಮೈಸೂರಿಗೆ ಬಂದಿದ್ದಾಗ ಕುವೆಂಪು ಅವರು ಖಾದಿ ಬಟ್ಟೆ ಧರಿಸಿ ತನ್ನ ಇಂಗ್ಲಿಷ್ ಭಾಷೆಯ ಕವನ ಸಂಕಲನವನ್ನು ಕೊಟ್ಟರು. ಕವನಗಳನ್ನು ಓದಿದ ಐರಿಷ್ ಕವಿ, ರಾಷ್ಟ್ರ ಪ್ರೇಮದ ಬಟ್ಟೆ ಧರಿಸಿದ್ದೀರಾ, ಇಂಗ್ಲಿಷ್ ಮೇಲೆ ಯಾಕೆ ವ್ಯಾಮೋಹ. ನಿಮ್ಮ ಮಾತೃಭಾಷೆಯಲ್ಲಿ ಸಾಹಿತ್ಯ ಬರೆದು ಹೆಸರು ಗಳಿಸಿ ಎಂದು ಹೇಳಿದರು. ಐರಿಷ್ ಕವಿ ಮಾತುಗಳಿಂದ ಅವಮಾನಿತರಾದ ಕುವೆಂಪು, ಅಂದಿನಿಂದಿಲೇ ಕನ್ನಡದಲ್ಲಿ ಸಾಹಿತ್ಯ ಕೃಷಿ ಪ್ರಾರಂಭಿಸಿದರು ಎಂದು ಹೇಳಿದರು.೧೯೩೨ನೇ ಇಸವಿಯಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತನ್ನೊಂದಿಗೆ ತೆರಳಲು ಸಿದ್ಧರಾಗಿರಿ ಎಂದು ತಮ್ಮ ತಂದೆಗೆ ಕುವೆಂಪು ಪತ್ರ ಬರೆದಿದ್ದರು. ಅದರಲ್ಲಿ ಕೊಡಗು ದಾರ್ಶನಿಯ ಸ್ಥಳ, ಕೊಡಗಿನ ಜನರು ಪರಿಸರ, ಕನ್ನಡ ಪ್ರೀತಿಯ ಬಗ್ಗೆ ತಂದೆಗೆ ಬರೆದ ಪತ್ರದಲ್ಲಿ ವಿವರಿಸಿದ್ದರು. ಅಲ್ಲದೇ ಬ್ರಿಟಿಷರ ಆಡಳಿತವಿರುವಾಗಲೇ ಕೊಡಗಿನಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿತ್ತು ಎಂದು ಮನುದೇವ್ ಸ್ಮರಿಸಿದರು.

ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತಾಡಿ, ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾಗಿದೆ. ಕನ್ನಡಿಗರು ಮೊದಲು ಕನ್ನಡವನ್ನು ಪ್ರೀತಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷ ಜೆ.ಸಿ. ಶೇಖರ್, ಮಾಜಿ ಕಸಾಪ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ ಇದ್ದರು.

೨೪ಎಸ್‌ಪಿಟಿ೦೧: ಸೋಮವಾರಪೇಟೆ ಸಾಹಿತ್ಯ ಭವನ ಮುಂಭಾಗ ನಿರ್ಮಾಣವಾಗಿರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಯನ್ನು ಶಾಸಕ ಡಾ. ಮಂತರ್ ಗೌಡ ಅನಾವರಣಗೊಳಿಸಿದರು. ೨೪ಎಸ್‌ಪಿಟಿ೦೨: ಸೋಮವಾರಪೇಟೆ ಸಾಹಿತ್ಯ ಭವನದ ಮುಂಭಾಗ ನಡೆದ ಕುವೆಂಪು ಪ್ರತಿಮೆ ಅನಾವರಣ ಸಮಾರಂಭದಲ್ಲಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ಹಾಗೂ ಕುವೆಂಪು ಅವರ ಸಮೀಪ ಬಂದು ಮನುದೇವ್ ದೇವಾಂಗಿ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

ಬಸ್ಸುಗಳಲ್ಲಿ ಸುರಕ್ಷತೆಗೆ ಸರ್ಕಾರ ತಾಕೀತು - ಕರ್ನೂಲ್‌ ಬಸ್‌ ಬೆಂಕಿ ದುರಂತ ಎಫೆಕ್ಟ್‌
ಉದ್ಯಮಿಗಳ ಜತೆ ಡಿ.ಕೆ. ಶಿವಕುಮಾರ್‌ ಡಿನ್ನರ್‌ : ನಗರಾಭಿವೃದ್ಧಿ ಬಗ್ಗೆ ಚರ್ಚೆ