ಕುವೆಂಪು ವಿಶ್ವಕ್ಕೆ ಮೌಲ್ಯ ಕೊಟ್ಟ ರಾಷ್ಟ್ರಕವಿ

KannadaprabhaNewsNetwork |  
Published : Jan 05, 2026, 01:45 AM IST
ಕುವೆಂಪು ವಿಶ್ವಕ್ಕೆ ಮೌಲ್ಯ ಕೊಟ್ಟ ಆದರಣೀಯ ಕವಿ- ಬಂಜಗೆರೆ ಜಯಪ್ರಕಾಶ್ | Kannada Prabha

ಸಾರಾಂಶ

ವಿಶ್ವ ಮಾನವ ಸಂದೇಶ ಮೂಲಕ ಕುವೆಂಪು ವಿಶ್ವಕ್ಕೆ ಮೌಲ್ಯ ಕೊಟ್ಟ ಕವಿಯಾಗಿದ್ದಾರೆ ಎಂದು ಸಂಸ್ಕೃತಿ ಚಿಂತಕರು ಮತ್ತು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.

ವಿಶ್ವಮಾನವ ದಿನಾಚರಣೆ: ರಾಜ್ಯಮಟ್ಟದ ವಿಚಾರಗೋಷ್ಠಿ, ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟನೆಯಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ್‌ ಹೇಳಿಕೆ

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ವಿಶ್ವ ಮಾನವ ಸಂದೇಶ ಮೂಲಕ ಕುವೆಂಪು ವಿಶ್ವಕ್ಕೆ ಮೌಲ್ಯ ಕೊಟ್ಟ ಕವಿಯಾಗಿದ್ದಾರೆ ಎಂದು ಸಂಸ್ಕೃತಿ ಚಿಂತಕರು ಮತ್ತು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.

ನಗರದ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನಿಂದ ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರ ವಿಶ್ವಮಾನವ ಕಲ್ಪನೆಯು ಮಾನವರು ಜಾತಿ, ಮತ- ಧರ್ಮಗಳ ಬೇಲಿಗಳನ್ನು ಮೀರಿ, ನೈತಿಕ ವ್ಯಕ್ತಿತ್ವದಿಂದ, ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನದಿಂದ ಬದುಕಬೇಕು, ಎಲ್ಲರೂ ಸಮಾನರು ಎಂದು ಸಾರುವ ಸಾರ್ವತ್ರಿಕ ಮಾನವತಾವಾದವಾಗಿದೆ ಎಂದರು.

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ, ನಂತರ ಅಲ್ಪ ಮಾನವರಾಗಿ ಮಾಡುತ್ತೇವೆ, ಜಾತಿ ಕಟ್ಟುಪಾಡುಗಳು ಬೇಡ, ವ್ಯಕ್ತಿಯನ್ನು ಜಾತಿಯಿಂದಲ್ಲ, ನೈತಿಕತೆ ಮತ್ತು ವೈಚಾರಿಕತೆಯಿಂದ ಗುರುತಿಸಬೇಮಾಗಿದೆ ಎಲ್ಲರೂ ಸ್ವತಂತ್ರವಾಗಿ, ಸಮಾನವಾಗಿ ಬದುಕಬೇಕು ಎಂಬುದು ವಿಶ್ವ ಮಾನವ ಸಂದೇಶ ಸದುದ್ದೇಶವಾಗಿದೆ ಎಂದರು.

ಕುವೆಂಪು ಅವರ ಪ್ರತಿ ಕಾದಂಬರಿ, ಕವಿತೆ, ಸಾಹಿತ್ಯದಲ್ಲೂ ವಿಶ್ವ ಮಾನವ ಸಂದೇಶ ಒಳಗೊಂಡಿದೆ, ಈ ಸಂದೇಶವು ಜಾತ್ಯಾತೀತ ಮತ್ತು ವಿಶ್ವಮಾನವ ಮನೋಭಾವದಿಂದ ಬಂದಿದೆ. ಕುವೆಂಪು ಅವರ ವಿಶ್ವಮಾನವ ಆದರ್ಶವನ್ನು ಅನುಸರಿಸಿ, ಸಮಾಜದ ಎಲ್ಲ ಅಡೆತಡೆಗಳನ್ನು ಮೀರಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಸಂದೇಶವನ್ನು ನೀಡಿದ್ದಾರೆ ಅದನ್ನು ಅನುಸರಿಸಿದರೆ ವಿಶ್ವ ಮಾನವರಾಗಲು ಸಾಧ್ಯ ಎಂದರು.

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ, ಆ ನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು ಎಂದರು.

ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು, ವಿಶ್ವಮಾನವನಾಗಿ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ಆದ್ಯ ಕರ್ತವ್ಯವಾಗಬೇಕು. ಅದನ್ನೇ ಪ್ರಪಂಚದ ಮಕ್ಕಳೆಲ್ಲ ’ಅನಿಕೇತನ’ರಾಗಬೇಕು ಎಂದು ಕುವೆಂಪು ಸಾರಿದ್ದಾರೆ ಎಂದರು.

ಕುವೆಂಪು ಅವರ ಸಾಹಿತ್ಯದಲ್ಲಿ ವಿಶ್ವಮಾನವ ಪರಿಕಲ್ಪನೆಗಳು ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಿದ ಮೈಸೂರು ಮಾನಸಗಂಗೋತ್ರಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರು ಪ್ರೊ. ಕೆ ಸಿ ಶಿವಾರೆಡ್ಡಿ ಮಾತನಾಡಿ ಕುವೆಂಪು ವಿಚಾರಗಳಾದ ವೈಚಾರಿಕ-ವೈಜ್ಞಾನಿಕ ಚಿಂತನೆಗಳನ್ನು ವ್ಯಕ್ತಿಯ ಅಂತರಂಗಕ್ಕೆ ತಂದುಕೊಳ್ಳುವ ಮೂಲಕ ಪ್ರತಿಯೊಬ್ಬರು ವಿಶ್ವಮಾನವರಾಗಲು ಸಾಧ್ಯ ಎಂದರು.

ಕುವೆಂಪು ಅವರ ಸಂದೇಶಗಳು ಮಾನವೀಯತೆಯ ಐಕ್ಯತೆ ಸಾರುತ್ತವೆ. ವಿಶ್ವಮಾನವ ಸಂದೇಶವು ಜಾತಿ, ಮತ, ಭಾಷೆ ಹಂತಗಳನ್ನು ಮೀರಿ ಒಗ್ಗೂಡಿಸುವುದನ್ನು ಒತ್ತು ಹೇಳುತ್ತದೆ. ಮೌಢ್ಯತೆ ಬಿತ್ತಬಾರದು ಆದರೆ ಪ್ರಸ್ತುತ ಮೌಢ್ಯತೆಯನ್ನು ಬಿತ್ತುವ ಯೋಜನೆಗಳನ್ನು ರೂಪಿಸಿ ತಮ್ಮ ತಮ್ಮ ಸ್ವಾರ್ಥತೆಯನ್ನು ಸಾಧಿಸಿಕೊಳ್ಳುತ್ತಿದ್ದಾರೆ ಎಂದರು.

ಕುವೆಂಪು ಸಾಹಿತ್ಯ ಹಾಗೂ ವಿಶ್ವಮಾನವ ಕಲ್ಪನೆಯ ಸಂದೇಶ ಸಾರಿದ ಆದರ್ಶಗಳು, ಜಾತ್ಯತೀತ ಮನೋಭಾವಗಳು, ಸರ್ವಕಾಲಿಕ ಮಾರ್ಗದರ್ಶನ ನೀಡುತ್ತವೆ, ಅಂಬೇಡ್ಕರ್ ಹಾಗೂ ಕುವೆಂಪು ವಿಚಾರಧಾರೆಗಳು ಒಂದೇ ಎಂದರು.

ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶಿವಕುಮಾರಸರಗೂರು, ಆಶಯನುಡಿಗಳನ್ನಾಡಿದರು.

ಅಭ್ಯಾಸಿ ತಂಡದವರಿಂದ ಕುವೆಂಪು ರಚಿತ ಗೀತ ಗಾಯನ ಕಾರ್ಯಕ್ರಮ ನಡೆಯಿತು, ೨ನೇ ಗೋಷ್ಠಿಯಲ್ಲಿ ಕುವೆಂಪು ಅವರ ನಾಟಕಗಳಲ್ಲಿ ಪೌರಾಣಿಕ ಮತ್ತು ಸಮಕಾಲೀನ ಚಿಂತನೆಗಳ ಅನುಸಂಧಾನ ಎಂಬ ವಿಷಯ ಕುರಿತ ಮಂಡನೆಯನ್ನು ಸಹಾಯಕ ಪ್ರಾಧ್ಯಾಪಕರು ನಾಗರಾಜಕುಮಾರ್ ಮಂಡಿಸಿ ಮಾತನಾಡಿದರು,

ಕವಿಗೋಷ್ಠಿಯಲ್ಲಿ ೨೫ ಹೆಚ್ಚು ಕವಿಗಳು ತಮ್ಮ ಕಾವ್ಯ ವಾಚನ ಮಾಡಿದರು, ಭಾಗವಹಿಸಿದ್ದರು. ಬೆಂಗಳೂರಿನ ಪ್ರಸಿದ್ದ ಕವಯಿತ್ರಿ ಎಚ್. ಆರ್ .ಸುಜಾತ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರ್ಕಾರಿ ನೌಕರರ ಸಂಘಧ ಅಧ್ಯಕ್ಷೆ ಡಾ. ರೇಣುಕಾದೇವಿ ಸಿ ಎನ್, ಸಹಾಯಕ ಪ್ರಾಧ್ಯಾಪಕ ನಾಗರಾಜಕುಮಾರ್ ಉಪಸ್ಥಿತರಿದ್ದರು.

೪ಸಿಎಚ್‌ಎನ್೧

ಚಾಮರಾಜನಗರ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನಿಂದ ನಗರದ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಸಂಸ್ಕೃತಿ ಚಿಂತಕರು ಮತ್ತು ಸಾಹಿತಿ, ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ