ವಿಶ್ವ ಮಾನವ ಸಂದೇಶ ಸಾರಿದ ಜಗದ ಕವಿ ಕುವೆಂಪು

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ತುಮಕೂರಿನಲ್ಲಿ ಕುವೆಂಪು ದಿನಾಚರಣೆ

ಕನ್ನಡಪ್ರಭ ವಾರ್ತೆ ತುಮಕೂರು

ವಿಶ್ವ ಮಾನವ ದಿನಾಚರಣೆ ಪ್ರಯುಕ್ತ ಕರುನಾಡ ವಿಜಯಸೇನೆ ಸಂಘಟನೆ ಶುಕ್ರವಾರ ನಗರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಅಚರಿಸಿ ಜಗದ ಕವಿಗೆ ಗೌರವ ನಮನ ಸಲ್ಲಿಸಲಾಯಿತು. ವಿಶೇಷ ಅಲಂಕೃತ ಮಂಟಪದಲ್ಲಿ ಸ್ಥಾಪಿಸಿದ್ದ ಕುವೆಂಪು ಅವರ ಭಾವಚಿತ್ರಕ್ಕೆ ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಕನ್ನಡ ನಾಡು, ನುಡಿ ನಮ್ಮ ಜೀವನಕ್ರಮವಾಗಬೇಕು. ಕನ್ನಡ ಭಾಷೆ ಉಳಿವು ಬೆಳವಣಿಗೆಗೆ ಎಲ್ಲರೂ ಕಾಳಜಿ ವಹಿಸಬೇಕು. ರಾಷ್ಟ್ರ ಕವಿ ಕುವೆಂಪು ಅವರ ಕನ್ನಡ ಸಾಹಿತ್ಯ ಕೊಡುಗೆ, ಕನ್ನಡ ಪ್ರೇಮದ ಮಾರ್ಗದರ್ಶನಲ್ಲಿ ಕನ್ನಡ ಕಟ್ಟುವ ಕಾರ್ಯದಲ್ಲಿ ನಾವೆಲ್ಲಾ ಒಂದಾಗಬೇಕು ಎಂದು ಹೇಳಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಗಮಿಸಿ ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಗೌರವ ಸಲ್ಲಿಸಿದರು.

ಕರುನಾಡ ವಿಜಯ ಸೇನೆ ರಾಜ್ಯಾಧ್ಯಕ್ಷ ಎಚ್.ಎನ್. ದೀಪಕ್ ಮಾತನಾಡಿ, ರಾಜ್ಯದ ಎಲ್ಲಾ ಶಾಲೆಕಾಲೇಜುಗಳಲ್ಲಿ ಕುವೆಂಪು ಅವರ ಜನ್ಮದಿನವನ್ನು ಹಬ್ಬದಂತೆ ಆಚರಣೆ ಮಾಡಿ, ರಾಷ್ಟ್ರಕವಿಯ ಹಿರಿಮೆ, ಕೊಡುಗೆಯನ್ನು ಯುವ ಪೀಳಿಗೆಗೆ ಪರಿಚಯಿಸಿ ನಾಡು ರಕ್ಷಣೆಗೆ ಅವರನ್ನು ಪ್ರೇರೇಪಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.

ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ. ಪರಮೇಶ್ ಮಾತನಾಡಿ, ಕನ್ನಡಪರ ಹೋರಾಟಕ್ಕೆ ಕುವೆಂಪು ಅವರ ಸಾಹಿತ್ಯ, ಆದರ್ಶಗಳು ಸ್ಫೂರ್ತಿಯಾಗಿವೆ. ರಾಷ್ಟ್ರ ಕವಿಯ ಮಾರ್ಗದರ್ಶನದಲ್ಲಿ ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗುವಂತೆ ಸಲಹೆ ಮಾಡಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಮಾನವರೆಲ್ಲರೂ ಒಂದೇ ಜಾತಿ ಎಂದು ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ಬದುಕು-ಬರಹ ಎಲ್ಲರಿಗೂ ಆದರ್ಶ. ಎಲ್ಲೆಡೆ ಕುವೆಂಪು ಜನ್ಮದಿನ ಆಚರಣೆ ಆಗಬೇಕು, ತುಮಕೂರಿನಲ್ಲಿ ಕುವೆಂಪು ಹೆಸರಿನಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಮತನಾಡಿದರು. ಕರುನಾಡ ವಿಜಯಸೇನೆ ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ರಾಜ್ಯ ಯುವ ಘಟಕ ಅಧ್ಯಕ್ಷ ಮಹೇಶ್, ಸಂಘಟನೆಗಳ ಮುಖಂಡರಾದ ಶಂಕರ್, ತನುಜ್‌ಕುಮಾರ್, ಪ್ರಸನ್ನ(ಪಚ್ಚಿ), ನಗರಪಾಲಿಕೆ ಸದಸ್ಯರಾದ ಎಚ್.ಡಿ.ಕೆ. ಮಂಜುನಾಥ್, ಜೆ.ಕುಮಾರ್, ಮನೋಹರಗೌಡ, ವಿಜಯಸೇನೆ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ, ಉಪಾಧ್ಯಕ್ಷ ಮನಸೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಜಿ. ಹರೀಶ್, ಸಂಘಟನಾ ಕಾರ್ಯದರ್ಶಿ ಸಿ.ಎಂ ಆದೇಶ್, ನಗರ ಅಧ್ಯಕ್ಷ ಯಧುನಂದನ್, ಲಕ್ಷ್ಮೀನಾರಾಯಣ ರೆಡ್ಡಿ, ಪವನ್, ನಾಸೀರ್, ಗಂಗೇಶ್ ಮೊದಲಾದವರು ಭಾಗವಹಿಸಿದ್ದರು.

Share this article