ಕುಶಾಲನಗರ: ದಾರ್ಶನಿಕ ಕವಿ ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣಿಕೆಯನ್ನು, ವೈಚಾರಿಕತೆಯನ್ನು ಬಿತ್ತಿದ ಮಹಾನ್ ಚೇತನವಾಗಿದ್ದು, ಅವರು ರೂಪಿಸಿದ ‘ವಿಶ್ವಮಾನವ ಸಂದೇಶ‘ ಸಾರ್ವಕಾಲಿಕ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟರು.
ಮಾನವನ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾ ಪುರುಷರು ಜನಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡ ವಿಶ್ವಮಾನವ ಸಂದೇಶದ ಪರಿಕಲ್ಪನೆಯು ಜಾತಿ ಮತ ಧರ್ಮಗಳನ್ನು ಮೀರಿದ್ದಾಗಿದೆ. ಈ ವಿಚಾರಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ. ದಿನೇಶ್ ಮಾತನಾಡಿ, ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ–ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ ಎಂದರು. ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಬಿ.ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕುಶಾಲನಗರ ರೋಟರಿ ಪೂರ್ವಾಧ್ಯಕ್ಷ ಎಂ.ಡಿ. ರಂಗಸ್ವಾಮಿ, ಕುಶಾಲನಗರ ಪುರಸಭೆ ಮಾಜಿ ಸದಸ್ಯ ಪ್ರಕಾಶ್, ಕನ್ನಡ ಸಿರಿ ಸ್ನೇಹ ಬಳಗದ ಪ್ರಮುಖರಾದ. ಕೆ.ಕೆ. ನಾಗರಾಜಶೆಟ್ಟಿ, ನಿವೃತ್ತ ಶಿಕ್ಷಕ ಉ.ರಾ. ನಾಗೇಶ್, ಖಾನ್ ಮಾಸ್ಟರ್, ಹೆಬ್ಬಾಲೆ ನಿವೃತ್ತ ಶಿಕ್ಷಕ ಎಚ್.ಎಸ್. ಲೋಕೇಶ್, ವಿವಿಧ ವಿಭಾಗಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕ ಡಾ. ಜಮೀರ್ ಅಹಮದ್ ನಿರೂಪಿಸಿದರು.ಕಾರ್ಯಕ್ರಮದ ಮೊದಲ ಗೋಷ್ಠಿಯಲ್ಲಿ ‘ರಾಷ್ಟ್ರಕವಿ ಕುವೆಂಪುರವರ ಸಮಗ್ರ ಸಾಹಿತ್ಯ’ ಕುರಿತು ಕಣಿವೆಯ ಖ್ಯಾತ ಸಾಹಿತಿಗಳಾದ ಭಾರದ್ವಾಜ ಕೆ. ಆನಂದತೀರ್ಥ ಉಪನ್ಯಾಸ ನೀಡಿ, ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ, ಅಂತಹ ದೃಷ್ಟಿ ಕೇವಲ ಒಂದು ಜಾತಿ, ಮತ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲ ಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆಯುತ್ತವೆ ಎಂದರು.
ರಸಪ್ರಶ್ನೆ ಸ್ಪರ್ಧೆ:ವಿಶ್ವಮಾನವ ಕುವೆಂಪುರವರ ಜನ್ಮೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯನ್ನು ಕುಶಾಲನಗರದ ನಿವೃತ್ತ ಶಿಕ್ಷಕ ಉ.ರಾ. ನಾಗೇಶ್ ನಡೆಸಿಕೊಟ್ಟರು.