ಕುವೆಂಪು ಸಾಹಿತ್ಯ ಜಾತಿ,ಧರ್ಮವೆಲ್ಲವನ್ನೂ ಮೀರಿದ್ದು: ಪ್ರಾಂಶುಪಾಲ ಪ್ರೊ.ಜಯಪ್ರಕಾಶ್ ಶೆಟ್ಟಿ

KannadaprabhaNewsNetwork | Published : Feb 22, 2025 12:50 AM
Follow Us

ಸಾರಾಂಶ

ಬುದ್ಧ, ಬಸವ, ಅಂಬೇಡ್ಕರ್, ಫುಲೆ ವಿಚಾರಧಾರೆಗಳ ಆಗರವಾಗಿರುವ ಕುವೆಂಪು ಚಿಂತನೆಗಳನ್ನು ಜನರಿಗೆ ದೊರೆಯದಂತೆ ಒಂದು ವರ್ಗ ಸಂಕುಚಿತಗೊಳಿಸುವ ಕೆಲಸ ಮಾಡುತ್ತಿವೆ. ಆ ನಿಟ್ಟಿನಲ್ಲಿ ವೈಚಾರಿಕತೆಗೆ ವಿರುದ್ಧವಾಗಿ ಜನರ ಮಧ್ಯೆ ಕುವೆಂಪು ಸಾಹಿತ್ಯ ಚಲಾವಣೆಯಾಗುತ್ತಿದೆ. ಈ ಬಹು ಸಂಸ್ಕೃತಿಯನ್ನು ನಾವೆಲ್ಲರೂ ಒಕ್ಕೊರಲಿನಿಂದ ಒಪ್ಪಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಕುವೆಂಪು ಅವರು ಸಾಹಿತ್ಯದ ಮೂಲಕ ಜಾತಿ, ಧರ್ಮವನ್ನು ಮೀರಿದ ಸಮಾಜವನ್ನು ಕಟ್ಟುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಕಾರಣ ಅವರ ಸಾಹಿತ್ಯ ಪ್ರಜಾಪ್ರಭುತ್ವದ ಪ್ರೀತಕವಾಗಿದೆ ಎಂದು ಉಡುಪಿ ಜಿಲ್ಲೆಯ ಹಿರಿಯಡ್ಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯಪ್ರಕಾಶ್ ಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಶ್ರೀ ರಾಮಾಯಣ ದರ್ಶನಂ ಕೃತಿಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕುವೆಂಪು ಅವರ ರಾಮಾಯಣ ದರ್ಶನ ಮುಖ್ಯವಾಗಿ ತುಳಿತಕ್ಕೆ ಒಳಗಾಗಿದ್ದ ತಳ ಸಮುದಾಯ ಮತ್ತು ಮಹಿಳೆಯರನ್ನು ಸಮಾನ ದೃಷ್ಟಿಯಿಂದ ಕಾಣುವ ಒಂದು ಹೊಸ ಚಿಂತನೆಗೆ ನಾಂದಿ ಹಾಡಿದ ಕೃತಿ. ಸಂವಿಧಾನದ ಪೀಠಿಕೆ ಬೋಧಿಸುವ ಎಲ್ಲಾ ಅಂಶಗಳನ್ನು ತಮ್ಮ ಸಾಹಿತ್ಯದ ಮೂಲಕ ಆಚರಣೆಗೆ ತರುವ ಕೆಲಸವನ್ನು ಕುವೆಂಪು ಮಾಡಿದರು. ಆದ್ದರಿಂದ ಕನ್ನಡದಲ್ಲಿ ರಾಮಾಯಣದ ಕುರಿತು ಹಲವು ಕೃತಿಗಳು ಬಂದಿದ್ದರೂ, ಶ್ರೀ ರಾಮಾಯಣದರ್ಶನಂ ಎಂದೆಂದಿಗೂ ಮೇರು ಸ್ಥಾನದಲ್ಲಿ ನಿಲ್ಲುತ್ತದೆ ಎಂದರು.

ಬುದ್ಧ, ಬಸವ, ಅಂಬೇಡ್ಕರ್, ಫುಲೆ ವಿಚಾರಧಾರೆಗಳ ಆಗರವಾಗಿರುವ ಕುವೆಂಪು ಚಿಂತನೆಗಳನ್ನು ಜನರಿಗೆ ದೊರೆಯದಂತೆ ಒಂದು ವರ್ಗ ಸಂಕುಚಿತಗೊಳಿಸುವ ಕೆಲಸ ಮಾಡುತ್ತಿವೆ. ಆ ನಿಟ್ಟಿನಲ್ಲಿ ವೈಚಾರಿಕತೆಗೆ ವಿರುದ್ಧವಾಗಿ ಜನರ ಮಧ್ಯೆ ಕುವೆಂಪು ಸಾಹಿತ್ಯ ಚಲಾವಣೆಯಾಗುತ್ತಿದೆ. ಈ ಬಹು ಸಂಸ್ಕೃತಿಯನ್ನು ನಾವೆಲ್ಲರೂ ಒಕ್ಕೊರಲಿನಿಂದ ಒಪ್ಪಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ.ರಾಮಲಿಂಗಪ್ಪ ಟಿ.ಬೇಗೂರು, ನಮ್ಮ ದೇಶದಲ್ಲಿ ೩೦೦ಕ್ಕೂ ಹೆಚ್ಚು ರಾಮಾಯಣಗಳು ರಚನೆಯಾಗಿವೆ. ಅವೆಲ್ಲವುಗಳಿಗಿಂತಲೂ ಭಿನ್ನವಾದ ಮತ್ತು ಜನಪರವಾದ, ವೈಚಾರಿಕವಾದ ಅಂಶಗಳನ್ನು ಒಳಗೊಂಡ ಶ್ರೇಯ ನಮ್ಮ ಕುವೆಂಪು ಅವರ ರಾಮಾಯಣಕ್ಕೆ ಸಲ್ಲುತ್ತದೆ ಎಂದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕ ವಿಶ್ವೇಶ್ವರಯ್ಯ, ದೊಡ್ಡಹನುಮಯ್ಯ, ಕನ್ನಡ ವಿಭಾಗದ ಮುಖ್ಯಸ್ಥ ಕೆ.ರವಿಚಂದ್ರ, ಎಚ್.ಇ.ರವಿಕುಮಾರ್, ಸಾದಿಕ್ ಪಾಶಾ, ಬೊಮ್ಮೇಕಲ್ಲು ವೆಂಕಟೇಶ್, ಶರಣಬಸಪ್ಪ, ಈರಣ್ಣ, ಸಂಗೀತಾ, ಶ್ರೀನಿವಾಸ್ ಆಚಾರ್, ಶ್ರೀನಿವಾಸಪ್ಪ, ಸಂಗೀತಾ ಅರ್ಜುನ್‌ಗೌಡ, ಹರೀಶ್ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.