ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಂದ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ದಿ. ಗಂಗಮ್ಮ ರಾಚಪ್ಪ ದತ್ತಿನಿಧಿ ಕಾರ್ಯಕ್ರಮದ ಕುವೆಂಪು ಗೀತ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುವೆಂಪು ರಚಿತ ಸಾಹಿತ್ಯದಲ್ಲಿ ಸಮಾಜಕ್ಕೆ ನೀಡಿರುವ ಸಂದೇಶಗಳ ಕುರಿತು ಮಾತನಾಡಿದ ಕುಶಾಲನಗರದ ಸಾಹಿತಿ, ಉಪನ್ಯಾಸಕಿ ಎನ್.ಕೆ. ಮಾಲದೇವಿ ಮಾತನಾಡಿ, ಕುವೆಂಪು ರಚಿಸಿದ ಲೇಖನಗಳಿರಬಹುದು, ಕಥೆಗಳಿರಬಹುದು, ಕವನಗಳಿರಬಹುದು, ಕಾದಂಬರಿಗಳಿರಬಹುದು, ಮಹಾಕಾವ್ಯವಿರಬಹುದು ಅವೆಲ್ಲದರಲ್ಲೂ ಕೂಡ ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಿದ್ದಾರೆ. ಅವರ ಸಾಹಿತ್ಯವನ್ನು ಮನನ ಮಾಡಿದರೆ ಮಾತ್ರ ಆ ಸಂದೇಶ ನಮ್ಮ ಮನಸ್ಸಿಗೆ ನಿಲುಕಲು ಸಾಧ್ಯ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕುವೆಂಪು ಮುಟ್ಟದ ಸಾಹಿತ್ಯ ಪ್ರಕಾರಗಳಿಲ್ಲ ಎನ್ನಬಹುದು ಎಂದರು.
ದತ್ತಿ ದಾನಿ, ಶಿಕ್ಷಕಿ ಸ್ನೇಹ ಬಸಮ್ಮ ಮಾತನಾಡಿ, ದತ್ತಿ ಇಟ್ಟ ಉದ್ದೇಶ ಯುವ ಜನರಲ್ಲಿ ಕುವೆಂಪು ಸಾಹಿತ್ಯ ಸಾಹಿತ್ಯದ ಕುರಿತು ಚರ್ಚೆ ಪ್ರಬಂಧಗಳು, ಸ್ಪರ್ಧೆಗಳು ನಡೆಯಬೇಕು ಎನ್ನುವುದಾಗಿತ್ತು. ಆದರೆ ಯುವಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ತುಂಬಾ ಬೇಸರ ತಂದಿದೆ ಎಂದರು.
ಕೊಡಗು ಜಿಲ್ಲಾ ಕಸಾಪ ನಿರ್ದೇಶಕ, ಅಧ್ಯಾಪಕ ಮ.ನ. ವೆಂಕಟ್ ನಾಯಕ್ ಮಾತನಾಡಿ, ಕುವೆಂಪು ವಿಚಾರಧಾರೆಗಳು, ಅವರ ಆದರ್ಶಗಳು, ಅವರ ಲೇಖನಗಳು, ಅವರ ಸಾಹಿತ್ಯ ಎಲ್ಲವನ್ನೂ ಗಮನಿಸಿದರೆ ಕುವೆಂಪು ಕರ್ನಾಟಕದಲ್ಲಿ ಹುಟ್ಟದಿದ್ದರೆ ಕನ್ನಡ ಸಾಹಿತ್ಯ ಇಷ್ಟು ಸಮೃದ್ಧವಾಗಿ ಬೆಳೆಯುತ್ತಿರಲಿಲ್ಲ ಎಂದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಯಕರಾದ ಕುಶಾಲನಗರದ ಬಿ.ಎಸ್. ಪರಮೇಶ್ ರೈತ ಗೀತೆ ಹಾಡಿದರು. ಅಧ್ಯಾಪಕಿ ಜಯಲಕ್ಷ್ಮಿ ಮತ್ತು ತಂಡದವರು ನಾಡಗೀತೆ ಹಾಡಿದರು. ಕೊಡಗು ವಿದ್ಯಾಲಯದ ಕೆ.ವಿ. ರವಿ, ಅಮೃತ್ ರಾಜ್ ಮತ್ತು ಅನಿತಾ ರಾಜ್ ಸಹೋದರರು, ಗಾಯಕರಾದ ರಶ್ಮಿ, ಹೇಮಾ ಅಜಿತ್, ಸಬ್ ಇನ್‌ಸ್ಪೆಕ್ಟರ್ ಧನಂಜಯ್ ಅವರು ಹಾಡು ಹಾಡಿದರು.
ಇತ್ತೀಚೆಗೆ ನಿಧನರಾದ ಜಿಲ್ಲೆಯ ಹಿರಿಯ ಗಾಯಕ ಲಿಯಾಕತ್ ಆಲಿ ಅವರಿಗೆ ಸಭೆ ಶ್ರದ್ಧಾಂಜಲಿ ಸಲ್ಲಿಸಿತು. ಅಧ್ಯಾಪಕಿ ಕೆ. ಜಯಲಕ್ಷ್ಮಿ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಸ್ವಾಗತಿಸಿದರು. ನಿರ್ದೇಶಕ ಸುಲೇಮಾನ್ ವಂದಿಸಿದರು.