ಚನ್ನಪಟ್ಟಣ: ಮಹಾ ದಾರ್ಶನಿಕರಾಗಿದ್ದ ಕುವೆಂಪು ನಮ್ಮ ಸಾಹಿತ್ಯದ ಮೂಲಕ ವಿಶ್ವಮಾನವ ಸಂದೇಶ ಸಾರಿದರು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಂತೆ ನಾವೆಲ್ಲ ಸಾಗಬೇಕಿದೆ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.
ಕನ್ನಡ ಉಪನ್ಯಾಸಕಿ ಶ್ವೇತಾಮಣಿ ಮಾತನಾಡಿ, ಕುವೆಂಪು ಅವರ ಕಿಂದರಿ ಜೋಗಿ ಮಕ್ಕಳ ಕವಿತೆಯಿಂದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದವರೆಗೂ ಸಾಹಿತ್ಯ ಸೃಷ್ಟಿ ಮಾಡಿದ್ದಾರೆ. ಈ ಜಗತ್ತು ಕಂಡ ದೈತ್ಯ ಪ್ರತಿಭೆ ಕುವೆಂಪು. ಕನ್ನಡಿಗರು ಆತ್ಮ ಸ್ಥೈರ್ಯ, ಸ್ವಾಭಿಮಾನ ಹೊಂದಲು ಕುವೆಂಪು ಬಹುಮುಖ್ಯ ಕಾರಣರು. ಕುವೆಂಪು ಅವರ ವಿಶ್ವಮಾನವ ಸಂದೇಶ, ಸ್ತ್ರೀ ಸಂವೇದನೆ, ಸಮಸಮಾಜದ ಆಶಯ, ಮಂತ್ರ ಮಾಂಗಲ್ಯ ಮುಂತಾದ ಪರಿಕಲ್ಪನೆಗಳನ್ನು ಕಟ್ಟಿ ಕೊಟ್ಟ ಮಹಾ ಮಾನವತಾವಾದಿ ಕುವೆಂಪು ಎಂದು ಹೇಳಿದರು.
ಇತಿಹಾಸ ಉಪನ್ಯಾಸಕ ಶಶಿಧರ್ ಮಾತನಾಡಿ, ಪ್ರಕೃತಿ ಸೌಂದರ್ಯದ ವರ್ಣನೆಯಲ್ಲಿ ಕುವೆಂಪು ಅವರು ಎತ್ತಿದ ಕೈ. ಕಾದಂಬರಿಯಲ್ಲಿನ ಸಣ್ಣಪುಟ್ಟ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಕುವೆಂಪು ಅವರ ಸಾಹಿತ್ಯಕ್ಕೆ ಸಾಟಿಯೇ ಇಲ್ಲ. ಪ್ರಸ್ತುತ ಬದುಕಿಗೆ ಕುವೆಂಪು ಅವರ ಸಾಹಿತ್ಯದ ಅವಶ್ಯಕತೆ ಹೆಚ್ಚಾಗಿದೆ ಎಂದು ತಿಳಿಸಿದರು.ವೇದಿಕೆ ಅಧ್ಯಕ್ಷೆ ಡಾ.ರಾಜಶ್ರೀ ಮಾತನಾಡಿ, ಹೊಸ ತಲೆಮಾರಿನ ಉದಯೋನ್ಮುಖ ಬರಹಗಾರರ ಪುಸ್ತಕ ಪ್ರಕಟಣೆ ಮತ್ತು ಬಿಡುಗಡೆ ಕಾರ್ಯಕ್ರಮಕ್ಕೆ ನಮ್ಮ ವೇದಿಕೆ ಸಹಕಾರ ನೀಡುತ್ತದೆ. ದಿವಂಗತ ಕವಿ ಡಾ. ನಾಗರಾಜ್ ಅವರ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಆಶಯಗಳನ್ನು ಈಡೇರಿಸುವ ದಿಸೆಯಲ್ಲಿ ವೇದಿಕೆ ಸಾಗುತ್ತಿದೆ ಎಂದರು.
ಗಾಯಕಿ ಚಂದ್ರಿಕಾ, ಡಿ.ಪುಟ್ಟಸ್ವಾಮಿಗೌಡ ಕುವೆಂಪು ಗೀತೆಗಳ ಗಾಯನ ನಡೆಸಿಕೊಟ್ಟರು.ಪೊಟೋ೭ಸಿಪಿಟಿ೬:
ಚನ್ನಪಟ್ಟಣದಲ್ಲಿ ಡಾ.ನಾಗರಾಜ್ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ಗೀತಗಾಯನ ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಮಾಡಲಾಯಿತು.