ಕನ್ನಡಪ್ರಭ ವಾರ್ತೆ ಮೈಸೂರುನಾಗರಿಕ ಸಮಾಜದಲ್ಲಿ ಎಲ್ಲರಿಗೂ ಸತ್ಯ ಹೇಳುವ ಸ್ವಾತಂತ್ರ್ಯವಿದೆ. ಇಲ್ಲಿ ಯಾರ ಸ್ವಾತಂತ್ರ್ಯಕ್ಕೂ ಧಕ್ಕೆ ಆಗಬಾರದು. ಎಲ್ಲರನ್ನೂ ಗೌರವಿಸಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಘಟಕವು ಜಂಟಿಯಾಗಿ ಆಯೋಜಿಸಿದ್ದ ಸಾಹಿತ್ಯ ಮತ್ತು ಜೀವನ: ಆಧುನಿಕ ಅನುಸಂಧಾನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬದಲಾದ ಕಾಲದಲ್ಲಿ ಬದಲಾದ ಸಮಸ್ಯೆಗಳು ಇದ್ದೇ ಇರುತ್ತವೆ; ಆದರೆ ಅವನ್ನು ಸರಿಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಾಹಿತ್ಯ ಸಹಾಯವಾಗಬಲ್ಲದು. ಪಂಪನಿಂದ ಮೊದಲ್ಗೊಂಡು ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ ಮೊದಲಾದವರನ್ನು ಒಳಗೊಂಡ ಇಲ್ಲಿಯವರೆಗಿನ ಕನ್ನಡ ಸಾಹಿತಿಗಳ ಸಾಹಿತ್ಯ ಕೃಷಿಯಲ್ಲಿ ಬದುಕಿಗೆ ಅಗತ್ಯವಿರುವ ಸಾಕಷ್ಟು ಮೌಲ್ಯಗಳು ಹುದುಗಿವೆ. ಇವನ್ನು ವಿದ್ಯಾರ್ಥಿಗಳು ಓದಿನ ಮೂಲಕ ಗ್ರಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪುಟ್ಟರಾಜ ಮಾತನಾಡಿ, ಯಾವುದೇ ಸಾಹಿತಿಗಳು ಸುಮ್ಮನೇ ಸಾಹಿತ್ಯವನ್ನು ರಚಿಸಿಲ್ಲ; ಬದಲಾಗಿ ತಮ್ಮ ಬದುಕಿನಲ್ಲಿ ಅನುಭವಿಸಿದ ಅನುಭವಗಳನ್ನೇ ಅಲ್ಲಿ ಕಟ್ಟಿಕೊಟ್ಟಿದ್ದಾರೆ. ಸಮಾಜದ ಎಲ್ಲಾ ವರ್ಗದ, ಎಲ್ಲಾ ಕಾಲದ ಎಲ್ಲಾ ರೀತಿಯ ಬದುಕಿನ ಸವಾಲುಗಳಿಗೆ ಸಾಹಿತ್ಯ ಉತ್ತರಿಸುತ್ತದೆ. ಇಂತಹ ಸಾಹಿತ್ಯವನ್ನು ಯುವಪೀಳಿಗೆ ಓದಿ ಅರ್ಥೈಸಿಕೊಂಡು ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬೆಟ್ಟೇಗೌಡ, ಐಕ್ಯೂಎಸಿ ಸಂಚಾಲಕ ಡಾ.ಎಸ್.ವಿ. ಮುರುಳೀಧರ, ಪತ್ರಾಂಕಿತ ವ್ಯವಸ್ಥಾಪಕ ಎಂ. ವಿದ್ಯಾರಣ್ಯ, ವಿಶ್ರಾಂತ ಪ್ರಾಧ್ಯಾಪಕ ವಿಶ್ವನಾಥ ಗುಪ್ತ, ಸಹ ಪ್ರಾಧ್ಯಾಪಕ ಡಾ.ಆರ್. ಗುರುಸ್ವಾಮಿ, ಉಪನ್ಯಾಸಕರಾದ ಶೋಭಾರಾಣಿ, ಡಾ. ಹರ್ಷಿಣಿ, ಡಾ. ಯಲ್ಲವ್ವ ಹೆಬ್ಬಳ್ಳಿ ಇದ್ದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಆರ್.ಎಸ್. ಅಶ್ವಿನಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಐಚ್ಛಿಕ ಕನ್ನಡ ವಿದ್ಯಾರ್ಥಿಗಳಾದ ಎನ್. ಅಶ್ವಿನಿ ನಿರೂಪಿಸಿದರು. ರಕ್ಷಿತಾ ಪ್ರಾರ್ಥಿಸಿದರು. ಆರ್. ವರ್ಷ ವಂದಿಸಿದರು.