ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ
ಯುವ ತಲೆಮಾರನ್ನು ಕನ್ನಡಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಸೂಕ್ತ ಅವಕಾಶ ಕಲ್ಪಿಸುವ ವೇದಿಕೆಯಾಗಿ, ನೂತನ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾರ್ಯವೆಸಗಬೇಕು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ಯುಗ ಪುರುಷ ಕಿನ್ನಿಗೋಳಿ ಆಶ್ರಯದಲ್ಲಿ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಕನ್ನಡ ಭವನ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಹಭಾಗಿತ್ವದಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಆಯೋಜಿಸಲಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಸರ್ಕಾರ ಕನ್ನಡ ಶಾಲೆಗಳನ್ನು ಕಡೆಗಣಿಸಿದ್ದು, ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೀಡುತ್ತಿಲ್ಲ. ಪ್ರತಿವರ್ಷ ಸಾವಿರಾರು ಶಾಲೆಗಳು ಮುಚ್ಚುತ್ತಿದ್ದು ಬರೆಯುವವರು ಹೆಚ್ಚಾಗಿದ್ದರೂ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪುಸ್ತಕವನ್ನು ಕೊಂಡು ಓದುವ ಪ್ರವೃತ್ತಿ ಬೆಳೆಯಬೇಕೆಂದು ಹೇಳಿದರು.
ಮುಂಬೈಯ ವಿಶ್ವನಾಥ ದೊಡ್ಮನೆ ಸಂಪಾದಕತ್ವದ ಹೊರನಾಡಿನಲ್ಲಿ ತುಳುವರು ಪುಸ್ತಕವನ್ನು ರಾಷ್ತ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ಬಿಡುಗಡೆಗೊಳಿಸಿದರು.
ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ:ಡಾ.ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ಶ್ರೀಪತಿ ಭಟ್ ಮೂಡುಬಿದಿರೆ, ಯುಗಪುರುಷದ ಭುವನಾಭಿರಾಮ ಉಡುಪ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಸ್ವಾಗತಿಸಿದರು. ರಾಜ್ಯ ಸಂಚಾಲಕಿ ಡಾ.ಶಾಂತಾ ಪುತ್ತೂರು ಪ್ರಸ್ತಾವನೆಗೈದರು. ವಸಂತಕೆರೆಮನೆ, ಅನಿತಾ ಶೆಣೈ ಉಪಸ್ಥಿತರಿದ್ದರು. ರೇಖಾ ಸುದೇಶರಾವ್, ಅಪೂರ್ವಕಾರಂತ್ ನಿರೂಪಿಸಿದರು. ಉಷಾ ಶಶಿಧರ್ ವಂದಿಸಿದರು.