ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಅಕಾಡೆಮಿ ಅಧ್ಯಕ್ಷ ಯು.ಎಚ್. ಉಮರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕುವೇಂಡ ವೈ. ಹಂಝತುಲ್ಲಾ ಅವರು, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಂದ 50000 ರು. ನಗದು ಬಹುಮಾನವನ್ನು ಒಳಗೊಂಡ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಜೋಕಿಂ ಆಳ್ವಾರಿಸ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಬಂಟ್ವಾಳ ಮೂಡದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಜಾಕ್ ಅನಂತಾಡಿ ಸೇರಿದಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು, ಬ್ಯಾರಿ ಸಮುದಾಯದ ಸಾಮಾಜಿಕ ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.ಸಮಾರಂಭದ ನಂತರ ಕೊಡಗಿನಿಂದ ತೆರಳಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ ನೇತೃತ್ವದ ಪ್ರಮುಖರ ನಿಯೋಗ ಗೌರವ ಪ್ರಶಸ್ತಿ ಪುರಸ್ಕೃತ ಕುವೇಂಡ ವೈ. ಹಂಝತುಲ್ಲಾ ಅವರಿಗೆ ಶಾಲು ಹೊದಿಸಿ, ಹಾರಾರ್ಪಣೆ ಮಾಡಿ ಅಭಿನಂದಿಸಿತು.
ಕೆ.ವೈ. ಹಂಝತುಲ್ಲಾ ಅವರು ದಿ. ಕುವೇಂಡ ಯೂಸುಫ್ ಹಾಜಿ ಮತ್ತು ದಿ.ನಫೀಸಾ ದಂಪತಿಯ ಪುತ್ರ.