ಮಂಗಳೂರು: ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಭೀತಿ ಮುಂದುವರಿದಿದ್ದು, ಭಾನುವಾರ ಇರಾನ್‌ನ ಎರಡು ಕ್ಷಿಪಣಿಯನ್ನು ಕುವೈಟ್‌ನ ರಕ್ಷಣಾ ವ್ಯವಸ್ಥೆ ಅರ್ಧದಲ್ಲೇ ಹೊಡೆದುರುಳಿಸಿದೆ. ಶನಿವಾರ ರಾತ್ರಿ ಕುವೈಟ್‌ನ ಟರ್ಮಿನಲ್-2 ವಿಮಾನ ನಿಲ್ದಾಣಕ್ಕೆ ಇರಾನ್ ಡ್ರೋನ್ ದಾಳಿ ನಡೆಸಿ ಹಾನಿ ಎಸಗಿದೆ. ಎಲ್ಲ ವಿಮಾನಗಳ ಹಾರಾಟ ರದ್ದುಪಡಿಸಿದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೀಗಾಗಿ ಆತಂಕದ ವಾತಾವರಣ ಇದ್ದರೂ ಭಾನುವಾರ ಕುವೈಟ್‌ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎಂದು ಕುವೈಟ್‌ನಲ್ಲಿ ಉದ್ಯೋಗದಲ್ಲಿರುವ ಕರಾವಳಿಗರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಇರಾನ್ ಹಾರಿಸಿದ ಎರಡು ಕ್ಷಿಪಣಿಗಳನ್ನು ಕುವೈಟ್ ರಕ್ಷಣಾ ವ್ಯವಸ್ಥೆ ಆಗಸದಲ್ಲೇ ತುಂಡರಿಸಿತ್ತು. ಇದನ್ನು ಹೊರತುಪಡಿಸಿದರೆ ಕುವೈಟ್ ಸಹಜ ಸ್ಥಿತಿಯಲ್ಲಿ ಇದೆ. ಇರಾನ್ ದಾಳಿ ಹಿನ್ನೆಲೆಯಲ್ಲಿ ಕುವೈಟ್‌ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಾಲ್‌ಗಳು ತೆರೆದಿದ್ದರೂ ಓಡಾಡುವರ ಸಂಖ್ಯೆ ವಿರಳವಾಗಿದೆ. ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿವೆ, ಖಾಸಗಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿದ್ದು, ಬಹುತೇಕ ಮಂದಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಕುವೈಟ್‌ನಲ್ಲಿರುವ ಕರಾವಳಿಯ ಮಂದಿ.
6 ತಿಂಗಳಿಗಾಗುವಷ್ಟು ಆಹಾರ ದಾಸ್ತಾನು: ಕುವೈಟ್‌ನಲ್ಲಿ ಸುಮಾರು 10.50 ಲಕ್ಷದಷ್ಟು ಭಾರತೀಯರಿದ್ದಾರೆ. ಎಲ್ಲ ಅನಿವಾಸಿ ಭಾರತೀಯರು, ಅದರಲ್ಲೂ ಕರಾವಳಿಯ ಕನ್ನಡಿಗರು ಎಲ್ಲರೂ ಕ್ಷೇಮವಾಗಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಿಮಾನ ಹಾರಾಟ ಬಂದ್ ಮಾಡಿರುವುದರಿಂದ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿಲ್ಲ. ಕುವೈಟ್ ಸರ್ಕಾರ ನಾಗರಿಕರ ರಕ್ಷಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಸುಮಾರು ಆರು ತಿಂಗಳಿಗೆ ಸಾಕಾಗುವಷ್ಟು ಆಹಾರ ವ್ಯವಸ್ಥೆಯನ್ನು ಸರ್ಕಾರ ದಾಸ್ತಾನಿರಿಸಿದೆ. ಹಾಗಾಗಿ ಕುವೈಟ್‌ನ ಪರಿಸ್ಥಿತಿ ಸಾಮಾನ್ಯವಾಗಿದ್ದು, ಯಾವುದೇ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎನ್ನುತ್ತಾರೆ ಕುವೈಟ್‌ನಲ್ಲಿರುವ ಕರಾವಳಿ ಮೂಲದ ಉದ್ಯಮಿ ರಾಜ್ ಭಂಡಾರಿ.ವೀಸಾ ಎಕ್ಸಿಟ್ ಬಳಿಕ ರದ್ದಾದ ವಿಮಾನ: ಈ ನಡುವೆ ಕುವೈಟ್‌ನ ಟೆನ್ನಿಸ್ ಅಕಾಡೆಮಿ ವೀಕ್ಷಣೆಗೆ ತೆರಳಿದ್ದ ಬೆಂಗಳೂರಿನ ಟೆನ್ನಿಸ್ ಪ್ರೇಮಿ ಮಹಿಳೆಯೊಬ್ಬರು ದಿನಪೂರ್ತಿ ಕುಟೈವ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ವಿದ್ಯಮಾನ ನಡೆದಿದೆ.
ವಾಪಸ್ ತೆರಳಲು ದುಬಾರಿ ಟಿಕೆಟ್ ಬರೆ: ವಿಮಾನ ರದ್ದತಿಯಿಂದಾಗಿ ಕುವೈಟ್‌ಗೆ ತೆರಳು ಸಾಧ್ಯವಾಗದೆ ಎಂಜಿನಿಯರ್‌ವೊಬ್ಬರು ಮಂಗಳೂರಲ್ಲೇ ಬಾಕಿಯಾಗಿದ್ದಾರೆ. ಮಂಜೇಶ್ವರ ಮೋಹನದಾಸ್ ಕಾಮತ್ ಎಂಬವರು 10 ದಿನದ ರಜೆಯಲ್ಲಿ ಪತ್ನಿ ಹಾಗೂ ಮಕ್ಕಳ ಕುಟುಂಬ ಸಮೇತ ಮಂಗಳೂರಿಗೆ ಬಂದಿದ್ದರು. ನಿಗದಿಯಂತೆ ಶನಿವಾರ ಕುವೈಟ್‌ಗೆ ತೆರಳಬೇಕಿತ್ತು. ಅದಕ್ಕಾಗಿ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಹೊರಡಲು ಸಿದ್ಧವಾಗಿದ್ದರು. ಅಷ್ಟರಲ್ಲಿ ವಿಮಾನ ಸಂಸ್ಥೆಯಿಂದ ವಿಮಾನ ವಿಳಂಬದ ಬಗ್ಗೆ ಮೊಬೈಲ್ ಸಂದೇಶ ಬಂದಿತ್ತು. ಸ್ವಲ್ಪ ಹೊತ್ತಿನ ಬಳಿಕ ವಿಮಾನ ಸಂಚಾರ ರದ್ದುಗೊಂಡ ಮಾಹಿತಿ ಲಭಿಸಿತ್ತು. ಕುವೈಟ್‌ನಲ್ಲಿ ಯುದ್ಧದ ವಾತಾವರಣದಿಂದಾಗಿ ಅಲ್ಲಿನ ಶಾಲೆಗಳು ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಸುವುದಾಗಿ ತಿಳಿಸಿದ್ದಾರೆ ಎನ್ನುತ್ತಾರೆ ಅವರು.