ಎಲ್.ಜಿ. ಹಾವನೂರ ಸಮ ಸಮಾಜ ನಿರ್ಮಾಣದ ಕನಸುಗಾರ: ಸಾಹಿತಿ ಸತೀಶ ಕುಲಕರ್ಣಿ

KannadaprabhaNewsNetwork |  
Published : Mar 26, 2025, 01:34 AM IST
ಹಾವೇರಿಯ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಎಲ್.ಜಿ. ಹಾವನೂರರ ಜನ್ಮದಿನದ ಪ್ರಯುಕ್ತ ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ. ಹಾವನೂರ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. | Kannada Prabha

ಸಾರಾಂಶ

ಎಲ್.ಜಿ. ಹಾವನೂರ ಅವರನ್ನು ನಾಡು ಮರೆಯುತ್ತಿದೆ. ಬದುಕಿನುದ್ದಕ್ಕೂ ಎದುರಾದ ಅವಮಾನಗಳನ್ನು ಬೆಳವಣಿಗೆಯ ಮೆಟ್ಟಿಲುಗಳನ್ನಾಗಿ ಕಟ್ಟಿಕೊಳ್ಳುತ್ತ ಎತ್ತರೆತ್ತರಕ್ಕೆ ಬೆಳೆದ ಈ ಮಹಾನ್ ಚೇತನರ ಬದುಕು ಸಾಧನೆಗಳನ್ನು ಸ್ಮರಿಸುವುದರೊಂದಿಗೆ, ಅವರು ಕಂಡ ಸಮ ಸಮಾಜದ ಕನಸನ್ನು ನನಸಾಗಿಸಬೇಕಾದ ಹಾದಿಯನ್ನು ನಾವು ಮತ್ತೆ ಮತ್ತೆ ಸ್ಪಷ್ಟಪಡಿಸಿಕೊಳ್ಳುವ ಅಗತ್ಯವಿದೆ.

ಹಾವೇರಿ: ಎಲ್.ಜಿ. ಹಾವನೂರ ಅವರು ದಕ್ಷಿಣ ಆಫ್ರಿಕದ ಸಂವಿಧಾನ ರಚನಾ ಸಲಹಾ ಸಮಿತಿ ಸದಸ್ಯರಾಗಿ, ಹಿಂದುಳಿದ ವರ್ಗದ ಆಯೋಗದ ಪ್ರಥಮ ಅಧ್ಯಕ್ಷರಾಗಿ ಬಹುಸಂಖ್ಯಾತ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯದ ಮೂಲಕ ಸಮ ಸಮಾಜವನ್ನು ನಿರ್ಮಿಸಬೇಕೆಂಬ ಕನಸು ಕಂಡು ಅದನ್ನು ನನಸಾಗಿಸಲು ಶ್ರಮಿಸಿದ ಮಹಾನ್ ಚೇತನ ಎಂದು ಸಾಹಿತಿ ಸತೀಶ ಕುಲಕರ್ಣಿ ತಿಳಿಸಿದರು.ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಎಲ್.ಜಿ. ಹಾವನೂರರ ಜನ್ಮದಿನದ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ. ಹಾವನೂರ ಪುಸ್ತಕ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಲ್.ಜಿ. ಹಾವನೂರ ಅವರನ್ನು ನಾಡು ಮರೆಯುತ್ತಿದೆ. ಬದುಕಿನುದ್ದಕ್ಕೂ ಎದುರಾದ ಅವಮಾನಗಳನ್ನು ಬೆಳವಣಿಗೆಯ ಮೆಟ್ಟಿಲುಗಳನ್ನಾಗಿ ಕಟ್ಟಿಕೊಳ್ಳುತ್ತ ಎತ್ತರೆತ್ತರಕ್ಕೆ ಬೆಳೆದ ಈ ಮಹಾನ್ ಚೇತನರ ಬದುಕು ಸಾಧನೆಗಳನ್ನು ಸ್ಮರಿಸುವುದರೊಂದಿಗೆ, ಅವರು ಕಂಡ ಸಮ ಸಮಾಜದ ಕನಸನ್ನು ನನಸಾಗಿಸಬೇಕಾದ ಹಾದಿಯನ್ನು ನಾವು ಮತ್ತೆ ಮತ್ತೆ ಸ್ಪಷ್ಟಪಡಿಸಿಕೊಳ್ಳುವ ಅಗತ್ಯವಿದೆ ಎಂದರು. ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ. ಹಾವನೂರ ಪುಸ್ತಕ ಬಿಡುಗಡೆ ಮಾಡಿದ ಸಾಹಿತಿ ಲತಾ ಹಳಕೊಪ್ಪ ಮಾತನಾಡಿ, ಹಾವನೂರು ಅವರು ಹಿಂದುಳಿದ ವರ್ಗದ ಜನರನ್ನು ಶೋಷಣೆಯಿಂದ ಮುಕ್ತಗೊಳಿಸಿ ಸಾಮಾಜಿಕ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಇಂತಹ ನಾಯಕನ ಸ್ಮರಣೆಯನ್ನು ಜೀವಂತವಾಗಿಡಲು ಸರ್ಕಾರ ಇವರ ಜನ್ಮದಿನವನ್ನು ಆಚರಿಸಬೇಕು ಎಂದರು.ಸಾಹಿತಿ ಡಾ. ರಮೇಶ ತೆವರಿ ಕೃತಿಯ ಕುರಿತು ಮಾತನಾಡಿ, ಎಲ್.ಜಿ. ಹಾವನೂರ ಅವರು ಬಾಲ್ಯದಿಂದಲೂ ಬಡತನ, ಹಸಿವು, ಅವಮಾನಗಳನ್ನು ಅರಗಿಸಿಕೊಂಡವರು. ಉಂಡ ನೋವುಗಳೇ ಸಾಮಾಜಿಕ ಸ್ವಾಸ್ಥ್ಯಕ್ಕೆ ಅಗತ್ಯವಿರುವ ಮದ್ದನ್ನು ರೂಪಿಸುವ ನಿಟ್ಟಿನಲ್ಲಿ ಅವರನ್ನು ಅಣಿಗೊಳಿಸಿದವು. ಸಾಹಿತಿ ಬಿ. ಶ್ರೀನಿವಾಸ ಅವರು ಎಲ್.ಜಿ. ಹಾವನೂರ ಬದುಕಿನ ಸಮಗ್ರ ನೋಟವನ್ನು ಸಾಮಾಜಿಕ ನ್ಯಾಯದ ಸಾಕ್ಷಿಪ್ರಜ್ಞೆ ಎಲ್.ಜಿ. ಹಾವನೂರ ಪುಸ್ತಕದಲ್ಲಿ ದಾಖಲಿಸುವ ಮೂಲಕ ಹಿಂದುಳಿದವರ ಏಳ್ಗೆಗಾಗಿ ಹಾವನೂರು ಅವರು ತಮ್ಮ ವಿದ್ವತ್ತನ್ನೆಲ್ಲ ಧಾರೆ ಎರೆದು ಹೋರಾಟ ಮಾಡಿರುವುದನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು. ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಆನವಟ್ಟಿ, ನ್ಯಾಯವಾದಿ ಬಸವರಾಜ ಹಾದಿಮನಿ, ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಅಶೋಕ ಹರನಗಿರಿ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ರವಿ ಹಾದಿಮನಿ ಮಾತನಾಡಿ, ಹಿಂದುಳಿದ ವರ್ಗಗಳ ಸಮುದಾಯಗಳು ಎಲ್.ಜಿ. ಹಾವನೂರ ಎಂಬ ಮಹಾನ್ ನೇತಾರನನ್ನು ಮರೆತಿವೆ. ಜನ್ಮದಿನದ ನೆಪದಲ್ಲಾದರೂ ಆ ಚೇತನವನ್ನು ಸ್ಮರಿಸಿ, ಅವರ ಮಾರ್ಗವನ್ನು ಗಟ್ಟಿಗೊಳಿಸುವ ಸಾಮಾಜಿಕ ನ್ಯಾಯಕ್ಕೆ ಅರ್ಥ ಬರುವಂತೆ ಮಾಡಿದ ಮಹನೀಯರನ್ನು ಗೌರವಿಸುವ ಕಾರ್ಯಗಳು ಆಗಬೇಕಾಗಿದೆ. ಹಾವೇರಿಯಲ್ಲಿ ಜಿಲ್ಲಾಡಳಿತ ಹಾವನೂರ ಅವರ ಜೀವನ ಸಾಧನೆ ತಿಳಿಸುವ ಥೀಮ್ ಪಾರ್ಕ ಸ್ಥಾಪಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಹಾವನೂರು ಅವರ ಬಂಧುಗಳಾದ ಶ್ರೀಧರ ದೊಡ್ಡಮನಿ ಹಾಗೂ ಪ್ರಶಾಂತ ನಾಲವಾರ, ಜಮೀರ ಜಿಗರಿ, ಪೀರಸಾಬ ಚೋಪದಾರ, ನಾಗರಾಜ ಬಡಮ್ಮನವರ, ಸಂಜಯಗಾಂಧಿ ಸಂಜೀವಣ್ಣನವರ, ಪ್ರಾ. ಎಂ. ಆಂಜನೇಯ, ಹುಚ್ಚೇಶ ವಾಲಿಕಾರ, ಮನೋಹರ ಹಾದಿಮನಿ, ಆನಂದ ಬೆಂಡಿಗೇರಿ, ಬಸವರಾಜ ಮಾಳಗಿ ಸೇರಿದಂತೆ ಇತರರು ಇದ್ದರು.ಅಮೃತ ಗುಂಜಾಳ ಸ್ವಾಗತಿಸಿದರು. ಲೇಖಕ- ಪ್ರಕಾಶಕ ಮಾಲತೇಶ ಅಂಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಜಾಲಿಹಾಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!