ಜೆಎನ್‌ಎನ್‌ಸಿಇ ಜತೆ ಎಲ್‌ ಆ್ಯಂಡ್‌ ಟಿ ಕಂಪನಿ ಒಡಂಬಡಿಕೆ: ಜಿ.ಎಸ್.ನಾರಾಯಣರಾವ್

KannadaprabhaNewsNetwork | Published : Jul 23, 2024 12:44 AM

ಸಾರಾಂಶ

ಶಿವಮೊಗ್ಗ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಎಲ್‌ ಆ್ಯಂಡ್‌ ಟಿ ಕಂಪನಿಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶೈಕ್ಷಣಿಕ ವಿದ್ಯಾಸಂಸ್ಥೆ ಮತ್ತು ಉದ್ಯಮದ ನಡುವಿನ ಸಹಯೋಗದಿಂದ ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ಕಲಿಕೆಗೆ ಸಾಧ್ಯವಾಗಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರತಿಷ್ಠಿತ ಎಲ್‌ ಆ್ಯಂಡ್‌ ಟಿ ಕಂಪನಿಯೊಂದಿಗೆ ಒಡಂಬಡಿಕೆ ಸಹಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರ ಕಡಿಮೆ ಮಾಡಿ ಪರಿಪೂರ್ಣ ಕಲಿಕೆಯೊಂದಿಗೆ ಪದವೀಧರರಾಗಿ ಸಮಾಜಕ್ಕೆ ತೆರೆದುಕೊಳ್ಳಲು ಇಂತಹ ಒಡಂಬಡಿಕೆಗಳು ಅತ್ಯವಶ್ಯಕ. ಇದು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಗಾಗಿ ವಿದ್ಯಾರ್ಥಿಗಳನ್ನು ಸಬಲಗೊಳಿಸುತ್ತದೆ ಎಂದು ಹೇಳಿದರು.

ಎಲ್‌ ಆ್ಯಂಡ್‌ ಟಿ ಅಂಥಹ ಪ್ರತಿಷ್ಠಿತ ಕಂಪನಿ ನಮ್ಮ ಕಾಲೇಜಿನ ಜೊತೆಗೆ ಒಡಂಬಡಿಕೆ ಮಾಡಿರುವುದು ಮತ್ತು ಇ-ಮೊಬಿಲಿಟಿ ಎಲೆಕ್ಟ್ರಿಕ್ ವಾಹನಗಳ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ ಸ್ಥಾಪನೆ ಮಾಡಲು ಯೋಜಿಸಿರುವುದು ಸಂತೋಷದ ವಿಷಯವಾಗಿದೆ. ಸಿವಿಲ್ ಮತ್ತು ಮೆಕ್ಯಾನಿಕಲ್ ವಿಷಯಗಳು ಇಂಜಿನಿಯರಿಂಗ್ ಕ್ಷೇತ್ರದ ಮೂಲ ಬೇರಾಗಿದ್ದು, ಹೊಸತನದ ಚಿಂತನೆ ಅಳವಡಿಸಿಕೊಳ್ಳುವುದರ ಮೂಲಕ ಮತ್ತೊಮ್ಮೆ ಬೇಡಿಕೆ ವಿಭಾಗವಾಗಿ ಮುನ್ನಲೆಗೆ ಬಂದಿದೆ ಎಂದು ತಿಳಿಸಿದರು.

ಉದ್ಯಮಗಳೊಂದಿಗೆ ಸಂಬಂಧ ವಿದ್ಯಾಸಂಸ್ಥೆಗಳಲ್ಲಿ ಪ್ರೌಢಿಮೆ ವಾತಾವರಣ ನಿರ್ಮಾಣ ಮಾಡಲಿದ್ದು, ಅಂಥಹ ಪೂರಕ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಇಂದು ಎಲೆಕ್ಟ್ರಿಕ್ ವಾಹನಗಳು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸುತ್ತಿದೆ. ಮತ್ತಷ್ಟು ಸಂಶೋಧನೆಗಳೊಂದಿಗೆ ಪರಿಸರಕ್ಕೆ ಉತ್ತಮವಾಗುವಂತಹ ನಾವೀನ್ಯ ಯೋಜನೆ ಅನುಷ್ಟಾನಗೊಳ್ಳಲಿ ಎಂದು ಆಶಿಸಿದರು.

ಎಲ್‌ ಆ್ಯಂಡ್‌ ಟಿ ಕಂಪನಿ ಎಜುಟೆಕ್ ವಿಭಾಗದ ಮುಖ್ಯಸ್ಥರಾದ ಫೆಬಿನ್.ಎಂ.ಎಫ್ ಮಾತನಾಡಿ, ಶೈಕ್ಷಣಿಕ ಮತ್ತು ಉದ್ಯಮದೊಂದಿಗೆ ನಿಜವಾದ ಒಡಂಬಡಿಕೆ ಪ್ರಾರಂಭವಾಗುವುದೆ ಅಲ್ಲೊಂದು ಹೊಸ ನಾವೀನ್ಯ ಪ್ರಯೋಗ ನಡೆದಾಗ. ಉಪನ್ಯಾಸಕ ವರ್ಗ ತಮ್ಮ ವಿದ್ಯಾರ್ಥಿ ಸಮೂಹದಿಂದ ಅಂಥಹ ನಾವೀನ್ಯ ಪ್ರಯೋಗಗಳಿಗೆ ಪೂರಕವಾಗುವಂತಹ ವಾತಾವರಣ ನಿರ್ಮಾಣ ಮಾಡಲು ನಿಸ್ವಾರ್ಥ ಪ್ರಯತ್ನ ನಡೆಸುತ್ತಿರುತ್ತಾರೆ ಎಂದು ಹೇಳಿದರು.

ಎಲ್‌ ಆ್ಯಂಡ್‌ ಟಿ ಕಂಪನಿ ಪ್ರತಿ ವರ್ಷ ಇಪ್ಪತ್ತು ಸಾವಿರಕ್ಕು ಹೆಚ್ಚು ಹೊಸ ನೌಕರ ವೃಂದ ಆಯ್ಕೆ ಮಾಡಿಕೊಳ್ಳುತ್ತಿದೆ. ಕಂಪನಿಗೆ ಕೌಶಲ್ಯ ಗುಣಗಳ ಬುದ್ಧಿವಂತ ನಾಯಕರು ಬೇಕಾಗಿದ್ದಾರೆ. ಅಂಥಹ ಕೌಶಲ್ಯತೆಗಳು ಕೇವಲ ಶೈಕ್ಷಣಿಕ ಅಧ್ಯಯನದಿಂದ ಮಾತ್ರ ಸಿಗುವುದಿಲ್ಲ ಎಂದು ಅರಿತ ಕಂಪನಿಯು, ಇಂಥಹ ಒಡಂಬಡಿಕೆ ಹಾಗೂ ಇಂಟರನ್‌ ಶಿಪ್ ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಅಗತ್ಯ ಕಾರ್ಯಕ್ಷಮತೆ ವೃದ್ಧಿಸುವಂತೆ ಪ್ರಯತ್ನಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜೆ.ಎನ್.ಎನ್.ಸಿಇ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಲ್‌ ಆ್ಯಂಡ್‌ ಟಿ ಕಂಪನಿ ಎಜುಟೆಕ್ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಮಾಯಾಂಕ್ ರಂಜನ್, ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಈ.ಬಸವರಾಜ್, ರೊಬೊಟಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ಬಸಪ್ಪಾಜಿ, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಚ್.ಬಿ.ಸುರೇಶ್, ಸಂಯೋಜಕ ಎಸ್.ಜೆ.ಅಮಿತ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this article