ಹೈನುಗಾರಿಕೆಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ: ಪಶು ವೈದ್ಯ ಬಸವರಾಜಪ್ಪ

KannadaprabhaNewsNetwork | Published : Jul 23, 2024 12:43 AM

ಸಾರಾಂಶ

ತರೀಕೆರೆ, ಹೈನುಗಾರಿಕೆಯಿಂದ ರೈತರ ಆರ್ಥಿಕವಾಗಿ ಅಭಿವೃದ್ಧಿ ಸಾಧ್ಯ. ಆಧುನಿಕ ಹೈನುಗಾರಿಕೆ ಅತ್ಯುತ್ತಮ ಎಂದು ಹುಣಸಘಟ್ಟ ಪಶು ವೈದ್ಯ ಬಸವರಾಜಪ್ಪ ಹೇಳಿದರು.

ಹೈನುಗಾರಿಕೆ ಬಗ್ಗೆ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಹೈನುಗಾರಿಕೆಯಿಂದ ರೈತರ ಆರ್ಥಿಕವಾಗಿ ಅಭಿವೃದ್ಧಿ ಸಾಧ್ಯ. ಆಧುನಿಕ ಹೈನುಗಾರಿಕೆ ಅತ್ಯುತ್ತಮ ಎಂದು ಹುಣಸಘಟ್ಟ ಪಶು ವೈದ್ಯ ಬಸವರಾಜಪ್ಪ ಹೇಳಿದರು. ಹುಣಸಘಟ್ಟ ಗ್ರಾಮದಲ್ಲಿ ಮಾದರಿ ಹೈನುಗಾರಿಕೆ ಮಾಡುತ್ತಿರುವ ಗಂಗಾಧರಪ್ಪ ಅವರ ಹೈನುಗಾರಿಕೆ ಘಟಕದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೃಷಿ ವಿಸ್ತರಣಾ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಹೈನುಗಾರಿಕೆ ಬಗ್ಗೆ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಹೈನುಗಾರಿಕೆ ಅನಾದಿ ಕಾಲದಿಂದ ನಡೆದುಬಂದ ವೃತ್ತಿ, ಭಾರತದಲ್ಲಿ ಹಸುವಿನ ಬಗ್ಗೆ ಗೋಮಾತೆ ಎಂಬ ಪವಿತ್ರ ಭಾವನೆ ಇದೆ. ಹಾಲಿನ ಜತೆಗೆ ಕೃಷಿಗೆ ಪೂರಕ ಗೊಬ್ಬರ ಜಾನುವಾರುಗಳಿಂದ ಲಭಿಸುತ್ತಿದೆ. ಇದನ್ನು ಇನ್ನಷ್ಟು ಲಾಭ ದಾಯಕವಾಗಿ ಮಾಡುವ ದೃಷ್ಟಿಯಿಂದ ಆಧುನಿಕ ಹೈನುಗಾರಿಕೆ ಪದ್ಧತಿ ಅನುಸರಿಸಬೇಕಾಗುತ್ತದೆ. ನಮ್ಮಲ್ಲಿ ದೇಸಿ ಮತ್ತು ವಿದೇಶಿ ರಾಸುಗಳು ಎಂಬ ಎರಡು ತಳಿಗಳಿವೆ. ದೇಸಿ ತಳಿಗಳು ಕಡಿಮೆ ಹಾಲು ನೀಡುತ್ತಿದ್ದು, ರೋಗ ನಿಯಂತ್ರಣ ಶಕ್ತಿ ಹೊಂದಿರುತ್ತವೆ ಎಂದು ಹೇಳಿದರು.ವಿದೇಶ ತಳಿಗಳು ಹೆಚ್ಚು ಹಾಲು ನೀಡುತ್ತವೆ. ಆದರೆ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ಶಕ್ತಿ ಕಡಿಮೆ. ಆಧುನಿಕ ಹೈನುಗಾರಿಕೆಯಲ್ಲಿ ಹೆಚ್ಚಿನ ರೈತರು ವಿದೇಶಿ ರಾಸುಗಳನ್ನು ಅವಲಂಬಿಸುತ್ತಾರೆ. ರಾಸುಗಳಲ್ಲಿ ನಿರೀಕ್ಷಿತ ಹಾಲು ಪಡೆ ಯಲು ಅದರ ಲಾಲನೆ ಪಾಲನೆ, ಆಹಾರಕ್ಕೂ ಹೆಚ್ಚಿನ ಆದ್ಯತೆ ಕೊಡಬೇಕಾಗುತ್ತದೆ. ಬಾಣಂತಿ ಹಸುಗಳು ಆರೈಕೆ, ಕರುವಿನ ಪೋಷಣೆ, ಕೊಟ್ಟಿಗೆ ನಿರ್ವಹಣೆ, ಜಾನುವಾರುಗಳ ಆಹಾರದಲ್ಲಿ ನಾರಿನ ಅಗತ್ಯ, ಜಾನುವಾರುಗಳ ಕೃತಕ ಗರ್ಭಧಾರಣೆ ಬಗ್ಗೆ ತಜ್ಞ ಪಶು ವೈದ್ಯರ ಸಲಹೆ ಪಡೆಯಬೇಕು, ಬೇಸಿಗೆ ಕಾಲದಲ್ಲಿ ಹೈನುರಾಸುಗಳ ಪಾಲನೆಗೆ ವಿಶೇಷ ಗಮನ ಕೊಡಬೇಕು ಎಂದು ತಿಳಿಸಿದರು. ಉತ್ತಮ ರಾಸುಗಳ ಆಯ್ಕೆ, ಹಾಲಿನ ಇಳುವರಿ, ಹಸು ಕೊಟ್ಟಿಗೆ ಸ್ವಚ್ಛತೆ, ಇಲಾಖೆಯಿಂದ ಲಭ್ಯವಿರುವ ಲಸಿಕೆಗಳು, ಚರ್ಮ ಗಂಟು ರೋಗ, ಕೆಚ್ಚಲು ಬಾವು ರೋಗ, ಕಾಲು ಬಾಯಿ ರೋಗ, ಸಮತೋಲನ ಆಹಾರ ನೀಡುವ ಕ್ರಮ, ಕೆಎಂಎಫ್, ಸೌಲಭ್ಯಗಳ ಬಗ್ಗೆ ಸೂಕ್ತ ಮಾಹಿತಿಯನ್ನು ರೈತರಿಗೆ ನೀಡಿದರು.ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷೆ ವಿಶಾಲಾಕ್ಷಮ್ಮ ತಿಪ್ಪೇಶಪ್ಪ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಹೈನುಗಾರಿಕೆಗೆ ಉತ್ತಮ ಕಾರ್ಯಕ್ರಮ ಮತ್ತು ಉತ್ತೇಜನ ನೀಡುತ್ತಿವೆ. ನಾವು ಅದನ್ನು ಉತ್ತಮ ರೀತಿಯಲ್ಲಿ ಬಳಸಿ ಯಶಸ್ವಿ ಹೈನೋದ್ಯಮ ಮಾಡಬಹುದು ಎಂದು ತಿಳಿಸಿದರು.ಹಾಲು ಉತ್ಪಾದಕ ಮಹಿಳಾ ಸಹಕಾರಿ ಸಂಘದ ಕಾರ್ಯದರ್ಶಿ ಗೌರಮ್ಮ ಪ್ರಶಾಂತ್ ಮಾತನಾಡಿ ಯೋಜನೆ ಉತ್ತಮ ಕಾರ್ಯಕ್ರಮ ನಡೆಸುತ್ತಿದೆ, ಕೃಷಿ ಚಟುವಟಿಕೆಗೆ ಹೈನುಗಾರಿಕೆ ಪೂರಕವಾಗಿದೆ. ಹೈನುಗಾರಿಕೆಯಲ್ಲಿ ತೊಡಗಿದ ಕುಟುಂಬ ಗಳು ಆರ್ಥಿಕವಾಗಿ ಸಬಲರಾಗುತ್ತಾ ಸಾಗಿರುವ ಉದಾಹರಣೆಗಳು ಬೇಕಾದಷ್ಟಿವೆ. ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗುವ ಮೂಲಕ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಧನಲಕ್ಷ್ಮೀ ಮಾತನಾಡಿ ಕೃಷಿ ಇಲಾಖೆ ಅನುದಾನಗಳು, ಬೆಳೆ ಸಮೀಕ್ಷೆ, ಪಸಲು ಬಿಮಾ ಯೋಜನೆಗಳು ಮತ್ತು ಸರ್ಕಾರದ ಕಾರ್ಯಕ್ರಮದ ಬಗ್ಗೆ ವಿವರಿಸಿದರು.ತಾಲೂಕು ಕೃಷಿ ಮೇಲ್ವಿಚಾರಕ ಸಂತೋಷ್ ಮಾತನಾಡಿ ಯೋಜನೆ , ಹೈನುಗಾರಿಕೆ ಅನುದಾನಗಳ ಬಗ್ಗೆ ವಿವರವಾಗಿ ತಿಳಿಸಿದರು. ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಶಾರದ ಪ್ರಕಾಶ್, ಮುಖಂಡ ತಿಪ್ಪೇಶಪ್ಪ, ಕೃಷಿ ಇಲಾಖೆಯ ಸುಧಾರಾಣಿ, ವಲಯ ಮೇಲ್ವಿಚಾರಕ ಹೊಮಿಯೋನಾಯ್ಕ್ , ಸೇವಾಪ್ರತಿನಿಧಿ ನಾಗರತ್ನ ಸಂಘದ ಸದಸ್ಯರು ರೈತರು ಉಪಸ್ಥಿತರಿದ್ದರು.22ಕೆಟಿಆರ್.ಕೆ.4ಃ

ತರೀಕೆರೆ ಸಮೀಪದ ಹುಣಸಘಟ್ಟ ಗ್ರಾಮದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಹೈನುಗಾರಿಕೆ ಬಗ್ಗೆ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಮುಖಂಡ ತಿಪ್ಪೇಶಪ್ಪ, ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಧನಲಕ್ಷ್ಮೀ , ಪಶುವೈದ್ಯ ಬಸವರಾಜಪ್ಪ, ತಾಲೂಕು ಕೃಷಿ ಮೇಲ್ವಿಚಾರಕ ಸಂತೋಷ್ ಮತ್ತಿತರರು ಇದ್ದರು.

Share this article