ಧಾರವಾಡ: ತ್ಯಾಗ, ಬಲಿದಾನಗಳಿಂದ ಪಡೆದ ಕಾರ್ಮಿಕ ಹಕ್ಕುಗಳ ಮೇಲಿನ ದಾಳಿಯನ್ನು ತಡೆದು, ಕಾರ್ಮಿಕ ವಿರೋಧಿ ಲೇಬರ್ ಕೋಡ್ ರದ್ದಾಗಲು, ರಾಜಿ ರಹಿತ ಕಾರ್ಮಿಕ ಹೋರಾಟ ಕಟ್ಟಲು ಮೇ ದಿನ ಸ್ಪೂರ್ತಿಯಾಗಲಿ ಎಂದು ಗುರುವಾರ 139ನೇ ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ಎಐಯುಟಿಯುಸಿ ಜಿಲ್ಲಾ ಸಮಿತಿ ವತಿಯಿಂದ ನಗರದ ಕಲಾಭವನ ಮೈದಾನದಿಂದ ಬಸ್ ನಿಲ್ದಾಣ ವೃತ್ತ, ಜ್ಯುಬಿಲಿ ವೃತ್ತದ ಮೂಲಕ ಕಾರ್ಮಿಕರ ಮೆರವಣಿಗೆ ನಡೆಯಿತು.
ಈ ಐತಿಹಾಸಿಕ ಹೋರಾಟದ ಪರಿಣಾಮವಾಗಿ 8 ತಾಸು ದುಡಿಮೆ ಹಾಗೂ ಇನ್ನಿತರ ನ್ಯಾಯಸಮ್ಮತ ಹಕ್ಕುಗಳು ದೊರೆತವು. ಆದರೆ, ಇಂದು ಕನಿಷ್ಟ 10-14 ತಾಸುಗಳ ಕೆಲಸ ಸಾಮಾನ್ಯವಾಗಿದೆ. ಕಾರ್ಪೋರೇಟ್ ಮಾಲೀಕರು ಎಲ್ಲಾ ಕಾರ್ಮಿಕ ಕಾಯ್ದೆಗಳನ್ನು ಗಾಳಿಗೆ ತೂರಿ, ವಾರದಲ್ಲಿ 72 -90 ಗಂಟೆ ಕೆಲಸ ಮಾಡಿ ಎಂದು ಕಾರ್ಮಿಕರಿಗೆ ''''ಉಪದೇಶ'''' ಮಾಡುತ್ತಿದ್ದಾರೆ. ಗರಿಷ್ಠ ಲಾಭವೊಂದೇ ಅವರ ಗುರಿಯಾಗಿದೆ.
ಮತ್ತೊಂದೆಡೆ ಆಳುವ ಎಲ್ಲ ಸರ್ಕಾರಗಳು ಇದೇ ಮಾಲೀಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಇದೀಗ ಅವರ ಲಾಭವನ್ನು ನೂರಾರುಪಟ್ಟು ಹೆಚ್ಚಿಸಲು ಕಾರ್ಮಿಕ ಕಾನೂನುಗಳನ್ನೇ ಬದಲಾವಣೆ ಮಾಡುತ್ತಿವೆ. 29 ಕಾರ್ಮಿಕ ಪರವಾದ ಕಾನೂನುಗಳನ್ನು ಸರ್ಕಾರ ನೆಲಸಮ ಮಾಡಿದೆ. ಖಾಯಂ ಉದ್ಯೋಗಗಳ ಸ್ಥಾನವನ್ನು ನಿಗದಿತ ಅವಧಿಯ ಉದ್ಯೋಗ ಆಕ್ರಮಿಸಲಿವೆ.ಗುತ್ತಿಗೆ-ಹೊರಗುತ್ತಿಗೆ ಹೆಸರಲ್ಲಿ ಕನಿಷ್ಠ ವೇತನ, ಪಿ.ಎಫ್. ಇಎಸ್‌ಐ, ರಜೆ ಮುಂತಾದ ಸೌಲಭ್ಯಗಳಿಂದ ಕಾರ್ಮಿಕರು ವಂಚನೆಗೆ ಒಳಗಾಗುತ್ತಿದ್ದಾರೆ. ಸ್ಕೀಂ ಅಡಿಯಲ್ಲಿ ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ದೂರದ ಮಾತು, ಕನಿಷ್ಠ ಪಕ್ಷ ಅವರನ್ನು ಕಾರ್ಮಿಕರೆಂದು ಪರಿಗಣಿಸಲು ಸರ್ಕಾರಗಳು ಸಿದ್ಧವಿಲ್ಲ. ನೀತಿಗಳ ವಿರುದ್ಧ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸುವ ಸಂಕಲ್ಪ ದಿನವನ್ನಾಗಿ ಆಚರಿಸಬೇಕಿದೆ ಎಂದರು.
ನಮ್ಮ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಯಾಗಿಸುತ್ತಾ, ಜಾತಿ, ಧರ್ಮ, ಭಾಷೆ, ಜನಾಂಗದ ಹೆಸರಲ್ಲಿ ಕಾರ್ಮಿಕರನ್ನು ಒಡೆದಾಳುವ ಪಿತೂರಿಗಳನ್ನು ಸೋಲಿಸಬೇಕಿದೆ. ಮೇ ದಿನದ ಈ ಸಂದರ್ಭದಲ್ಲಿ ಇಡೀ ಜಗತ್ತಿನ ಕಾರ್ಮಿಕ ವರ್ಗ ಜಾತಿ ಮತ ಸೇರಿದಂತೆ ಎಲ್ಲ ರೀತಿಯ ವಿಭಜಕ ವಿಷಯಗಳನ್ನು ಮೆಟ್ಟಿ ಒಗ್ಗಟ್ಟನ್ನು ಬಳಪಡಿಸಿಕೊಂಡು, ಸಾಮ್ರಾಜ್ಯಶಾಹಿಗಳು ನಡೆಸುತ್ತಿರುವ ಮಾನವತೆಯ ಈ ಕಗ್ಗೋಲೆಯನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ನೀಡಬೇಕಿರುವ ಹಿನ್ನಲೆಯಲ್ಲಿ ಮೇ ದಿನ ಸ್ಫೂರ್ತಿಯಾಗಿದೆ, ಎಂದರು.ಸಂಘಟನೆಯ ಜಿಲ್ಲಾಧ್ಯಕ್ಷ ಗಂಗಾಧರ್ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಭವನ ಬಳ್ಳಾರಿ , ಮುಖಂಡರಾದ ಯೋಗಪ್ಪ ಜೋತೆಪ್ಪನವರ, ಶೈನಾಜ ಹುಡೇದಮನಿ, ಅಲ್ಲಾಭಕ್ಷ ಕಿತ್ತೂರ, ಜ್ಯೋತಿ ವಾಯಚಾಳ, ಲಲಿತಾ ಹೊಸಮನಿ, ಮಾರುತಿ ವಿಟ್ಟೋಜಿ, ನವೀದ ಲಕಮಾಪುರ, ಜಯರಾಮ್, ಗಂಗಮ್ಮ ನಾಗನಾಯಕ, ಮಂಜುಳಾ ಕಲ್ಲೇದ, ಬೀಬಿ ಆಯಿಷಾ, ರೇಣುಕಾ ಪುರದಣ್ಣವರ ಇದ್ದರು. ಆಶಾ, ಬಿಸಿಯೂಟ, ಹಾಸ್ಟೆಲ್ ಗುತ್ತಿಗೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ಸೆಕ್ಟರ್ ಗಳ ಕಾರ್ಮಿಕರು ಪಾಲ್ಗೊಂಡಿದ್ದರು.