ಸಂಡೂರು: ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ನಾಲ್ಕು ಸಂಹಿತೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಎಐಯುಟಿಯುಸಿ (ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್) ತಾಲೂಕು ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿ, ಪಟ್ಟಣದ ಪುರಸಭೆ ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮುಖಂಡರು ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಅವರ ಮೂಲಕ ಪ್ರಧಾನಮಂತ್ರಿಗೆ ರವಾನಿಸಿದರು.ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ ಅವರು ಮನವಿ ಸಲ್ಲಿಸಿ, ಕಾರ್ಮಿಕರ ವಿರೋಧಿಯಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೂಡಲೇ ರದ್ದುಗೊಳಿಸಬೇಕು. ಅಸಂಘಟಿತ ವಲಯದ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಹಾಗೂ ಸ್ಕೀಂ ಕಾರ್ಮಿಕರು ಸೇರಿದಂತೆ ಎಲ್ಲ ಕಾರ್ಮಿಕರಿಗೆ ರಾಷ್ಟ್ರವ್ಯಾಪಿ ಮಾಸಿಕ ಕನಿಷ್ಠ ₹೨೬,೦೦೦ ವೇತನ ನೀಡಬೇಕು. ಎನ್‌ಪಿಎಸ್, ಯುಪಿಎಸ್ ಅನ್ನು ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ ಮರುಸ್ಥಾಪಿಸಬೇಕು. ಸಾರ್ವಜನಿಕ ವಲಯದ ಉದ್ಯಮಗಳು, ಸರ್ಕಾರಿ ಇಲಾಖೆಗಳ ಖಾಸಗೀಕರಣವನ್ನು ನಿಲ್ಲಿಸಿ, ರಾಷ್ಟ್ರೀಯ ಹಣ ಗಳಿಸುವ ಪೈಪ್‌ಲೈನ್ ರದ್ದುಗೊಳಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ. ಸರ್ಕಾರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ಸಂಯುಕ್ತ ಗಣಿ ಕಾರ್ಮಿಕ ಸಂಘದ ಹುಲಿಗೇಶ, ಬಾಬು, ಸಂತೋಷ, ಕೃಷ್ಣಪ್ಪ, ಮಂಜುನಾಥ, ಕೊಟ್ರೇಶ, ತಿಮ್ಮಣ್ಣ, ಬಸವರಾಜ, ಅಂಬರೀಶ, ಆಶಾ ಕಾರ್ಯಕರ್ತೆಯರ ಸಂಘದ ಜಲಜಾಕ್ಷಿ, ವೀರಮ್ಮ ಮುಂತಾದವರು ಭಾಗವಹಿಸಿದ್ದರು.ಮುಷ್ಕರಕ್ಕೆ ಹಲವು ಕಾರ್ಮಿಕ ಸಂಘಟನೆಗಳ ಬೆಂಬಲ: ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬುಧವಾರ ಕರೆ ನೀಡಲಾಗಿದ್ದ ಅಖಿಲ ಭಾರತ ಮುಷ್ಕರದಲ್ಲಿ ಸಂಡೂರಿನಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿದರು.ಪಟ್ಟಣದ ಎಪಿಎಂಸಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ವಿಜಯ ವೃತ್ತದಲ್ಲಿ ಧರಣಿ ನಡೆಸಿ, ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ರವಾನಿಸಿದರು.
ತಮ್ಮ ಬೇಡಿಕೆಗಳ ಕುರಿತು ಮಾತನಾಡಿದ ಸಿಐಟಿಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ ವಿವರಿಸಿದರು.ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ, ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಗ್ರಾಪಂ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಹಾಗೂ ಕಟ್ಟಡ ನಿರ್ಮಾಣ ನೌಕರರ ಫೆಡರೇಷನ್ ಸಂಘಗಳ ಮುಖಂಡರಾದ ಎಚ್.ಎಂ. ಮಲ್ಲಿಕಾರ್ಜುನಸ್ವಾಮಿ, ಎ. ಸ್ವಾಮಿ, ವಿ. ದೇವಣ್ಣ, ಟಿ.ಎಸ್. ಖಾಜಾಬನ್ನಿ, ಎಚ್.ಎಂ. ರೇಖಾ, ದಾಕ್ಷಾಯಿಣಿ, ಶರ್ಮಾಷ್, ಕಾಲುಬಾ, ಎನ್. ಸುಂಕಣ್ಣ, ದುರ್ಗಮ್ಮಾ, ಖಲಂದರ್ ಬಾಷಾ, ಪಂಪನಗೌಡ, ಮಲ್ಲಿಕಾರ್ಜುನ ಮೇಟಿ, ಪರಮೇಶ್ವರ, ಕಾಡಪ್ಪ ಹಾಗೂ ಹಲವು ಕಾರ್ಯಕರ್ತರು ಮುಷ್ಕರದಲ್ಲಿ ಭಾಗವಹಿಸಿದ್ದರು.