ರೋಗ ಪತ್ತೆ ನಿಖರ ಚಿಕಿತ್ಸೆಗೆ ಪ್ರಯೋಗಾಲಯದ ವರದಿ ಮುಖ್ಯ

KannadaprabhaNewsNetwork | Published : Jul 23, 2024 12:31 AM

ಸಾರಾಂಶ

ಅರಣ್ಯನಾಶ, ಹವಾಮಾನ, ಪರಿಸರ ಬದಲಾವಣೆಯಿಂದ ಪ್ರಾಣಿ ಮತ್ತು ಮನುಷ್ಯರಲ್ಲಿ ರೋಗಗಳ ಉಗಮಕ್ಕೆ ಕಾರಣವಾಗುತ್ತದೆ.

ಹೊಸಪೇಟೆ: ರೋಗಗಳ ಮೂಲ ಪತ್ತೆಗೆ, ನಿಖರ ಚಿಕಿತ್ಸೆಗಾಗಿ, ಔಷಧ, ಲಸಿಕೆ ಕಂಡು ಹಿಡಿಯಲು ಪ್ರಯೋಗಾಲಯದ ಪರೀಕ್ಷಾ ವರದಿಗಳು ಅತಿಮುಖ್ಯ ಪಾತ್ರ ವಹಿಸಲಿವೆ. ಈ ನಿಟ್ಟಿನಲ್ಲಿ ಹೊಸಪೇಟೆ ಇನ್ನರ್‌ವೀಲ್-ರೋಟರಿ ವತಿಯಿಂದ ಸುಸಜ್ಜಿತ ಮಾದರಿ ಪ್ರಯೋಗಾಲಯ ಆರಂಭಿಸಿರುವುದು ಶ್ಲಾಘನೀಯ ಎಂದು ಕಿರ್ಲೋಸ್ಕರ್ ಕಂಪನಿಯ ಟ್ರಸ್ಟಿ ಆರತಿ ಕಿರ್ಲೋಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಸ್ಟೇಷನ್ ರಸ್ತೆಯಲ್ಲಿ ಇನ್ನರ್‌ವೀಲ್ ಕ್ಲಬ್‌ನ 50ನೇ ವರ್ಷಾಚರಣೆ ಅಂಗವಾಗಿ ಶುಂಕುಸ್ಥಾಪನೆಗೊಂಡಿದ್ದ ಇನ್ನರ್‌ವೀಲ್-ರೋಟರಿ ಪೆಥಲಾಜಿಕಲ್ ಲ್ಯಾಬ್‌ನ್ನು ಸೋಮವಾರ ಲೋಕಾರ್ಪಣೆಗೊಳಿಸಿ, ಆನಂತರ ಪ್ರಿಯದರ್ಶಿನಿ ಪ್ರೈಡ್‌ನಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರಣ್ಯನಾಶ, ಹವಾಮಾನ, ಪರಿಸರ ಬದಲಾವಣೆಯಿಂದ ಪ್ರಾಣಿ ಮತ್ತು ಮನುಷ್ಯರಲ್ಲಿ ರೋಗಗಳ ಉಗಮಕ್ಕೆ ಕಾರಣವಾಗುತ್ತದೆ. ಶೇ.60 ರೋಗಗಳು ಪ್ರಾಣಿಗಳ ಮೂಲದಿಂದಲೂ ಬರುವ ಸಾಧ್ಯತೆಯಿದೆ. ಅದರಲ್ಲೂ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳು, ಎಚ್ಐವಿ, ವಿಭಿನ್ನ ಹೊಸ ಹೊಸ ರೋಗಗಳು ಮನುಷ್ಯನ ಮೇಲೆ ದಾಳಿ ಮಾಡುತ್ತಿದ್ದು, ಅವುಗಳ ಪತ್ತೆಗೆ, ನಿಯಂತ್ರಣ ಹಾಗೂ ಚಿಕಿತ್ಸೆಗೆ ಪ್ರಯೋಗಾಲಯಗಳ ಪರೀಕ್ಷೆಗಳು ಪ್ರಾಮುಖ್ಯತೆ ಪಡೆದಿವೆ. ಪ್ರಯೋಗಾಲಯದಲ್ಲಿ ರೋಗಗಳನ್ನು ಪತ್ತೆ ಮಾಡುವುದರಿಂದ ಸಮಯಾನುಸಾರ ಚಿಕಿತ್ಸೆ ನೀಡಿ ರೋಗ ತಡೆಗಟ್ಟಲು ಸಾಧ್ಯ. ನೂತನವಾಗಿ ಆರಂಭಿಸಿರುವ ಇನ್ನರ್‌ವೀಲ್ -ರೋಟರಿ ಪೆಥಲಾಜಿಕಲ್ ಲ್ಯಾಬ್‌ನಲ್ಲಿ ಎಲ್ಲ ರೀತಿಯ ಪರೀಕ್ಷೆಗಳಿಗೆ ರಿಯಾಯಿತಿ ದರ ವಿಧಿಸಿರುವುದು ಸ್ತುತ್ಯರ್ಹ ಕಾರ್ಯ ಎಂದರು.

ಕೊಪ್ಪಳದ ಕಿರ್ಲೋಸ್ಕರ್ ಕಂಪನಿಯ ವ್ಯವಸ್ಥಾಪಕ ಮುಖ್ಯಸ್ಥ ರವೀಂದ್ರ ಗುಮಾಸ್ತೆ ಮಾತನಾಡಿ, ಸಮಾಜ ಸೇವೆಗೆ ನಮ್ಮನ್ನು ನಾವು ತೊಡಗಿಸಿಕೊಂಡಾಗಲೇ ಅದರ ಮಹತ್ವ ತಿಳಿಯಲಿದೆ. ಸಾಮಾಜಿಕ ಜವಾಬ್ದಾರಿ ಅನುದಾನದಲ್ಲಿ ಕಂಪನಿಯಿಂದ ಸೇವೆ ಮಾಡಲು ಸದಾ ಸಿದ್ಧವಿದ್ದೇವೆ ಎಂದರು.

ಅದಿತಿ ಕಿರ್ಲೋಸ್ಕರ್ ಮಾತನಾಡಿದರು. ಇನ್ನರ್‌ವೀಲ್ ಅಧ್ಯಕ್ಷೆ ಸುನೀತಾ ಕಿಶೋರ್, ಕಾರ್ಯದರ್ಶಿ ರಾಜೇಶ್ವರಿ, ರೋಟರಿ ಅಧ್ಯಕ್ಷ ದೀಪಕ್ ಕೊಳಗದ್, ಕಾರ್ಯದರ್ಶಿ ವೀರಭದ್ರ, ಪೆಥಲಾಜಿಕಲ್ ಲ್ಯಾಬ್ ಛೇರ್‌ಮನ್‌ ವಿಜಯ್ ಸಿಂಧಗಿ, ಕಾರ್ಯದರ್ಶಿ ಸಜ್ಜನ್ ಖಯಾಲ್ ಉಪಸ್ಥಿತರಿದ್ದರು. ರೋಟರಿ ಟ್ರಸ್ಟ್ ಚೇರ್‌ಮನ್‌ ಹಕ್ ಸೇಠ್ ನಿರ್ವಹಿಸಿದರು. ಮಾಜಿ ಜಿಲ್ಲಾ ಗರ್ವನರ್ ಆದ ಗೋಪಿನಾಥ್, ಇನ್ನರ್‌ವೀಲ್‌ನ ಶೋಭಾ ಸಿಂಧಿಯಾ, ಡಾ. ಮಾಧವಿ ರೆಡ್ಡಿ ಇದ್ದರು.

Share this article