ಹಾಜರಾತಿ ಕೊರತೆ: ಎಸ್ಸೆಸ್ಸೆಲ್ಸಿ 20 ಮಕ್ಕಳು ಪರೀಕ್ಷೆಗೆ ಅನರ್ಹ

KannadaprabhaNewsNetwork | Published : Mar 22, 2025 2:01 AM

ಸಾರಾಂಶ

ಮುಖ್ಯ ಶಿಕ್ಷಕರು ಹಾಗೂ ತರಗತಿ ಮೇಲ್ವಿಚಾರಕರು ಬೇಕಂತಲೇ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಪ್ರವೇಶ ಪತ್ರ ನೀಡದೆ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಮಕ್ಕಳು ಶಾಲೆಗೆ ನಿರಂತರವಾಗಿ ಬರುತ್ತಿದ್ದರೂ ಸಹ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ, ಇದರಿಂದ ಶಾಲೆಯ ಫಲಿತಾಂಶ ಪ್ರಮಾಣ ಕಡಿಮೆಯಾಗುತ್ತದೆ ಎಂದು ಪರೀಕ್ಷೆಗೆ ಅವಕಾಶ ನೀಡುತ್ತಿಲ್ಲ ಎಂಬುದು ಪೊಷಕರ ಆರೋಪ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಒತ್ತಾಯಿಸಿ ಪೋಷಕರು ಮತ್ತು ವಿದ್ಯಾರ್ಥಿಗಳು ಕೆಪಿಎಸ್ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ಬೂದಿಕೋಟೆ ಗ್ರಾಮದಲ್ಲಿ ಶುಕ್ರವಾರ ನಡೆಯಿತು. ತಾಲೂಕಿನ ಬೂದಿಕೋಟೆ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ೨೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆ ನೆಪವೊಡ್ಡಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ.

ಫೇಲಾಗುತ್ತಾರೆಂದು ತಂತ್ರ

ಇದು ಪೋಷಕರ ಆಕ್ರೋಶಕ್ಕೆ ಕಾರಣವಾಯಿತು. ಮುಖ್ಯ ಶಿಕ್ಷಕರು ಹಾಗೂ ತರಗತಿ ಮೇಲ್ವಿಚಾರಕರು ಬೇಕಂತಲೇ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಪ್ರವೇಶ ಪತ್ರ ನೀಡದೆ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಮಕ್ಕಳು ಶಾಲೆಗೆ ನಿರಂತರವಾಗಿ ಬರುತ್ತಿದ್ದರೂ ಸಹ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ, ಇದರಿಂದ ಶಾಲೆಯ ಫಲಿತಾಂಶ ಪ್ರಮಾಣ ಕಡಿಮೆಯಾಗುತ್ತದೆ ಎಂದು ಪರೀಕ್ಷೆ ಬರೆಸಲು ಇಲ್ಲಸಲ್ಲದ ನೆಪವೊಡ್ಡಿ ಪರೀಕ್ಷೆಯಿಂದ ದೂರ ಉಳಿಯುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳು ತರಗತಿಗೆ ಹಾಜರಾಗದಿದ್ದರೆ ಪೋಷಕರಿಗೆ ಯಾಕೆ ಈ ಹಿಂದೆಯೇ ಮಾಹಿತಿ ನೀಡಲಿಲ್ಲ ಎಂದು ಪೋಷಕರು ಆರೋಪಿಸಿದರು.

ಶಾಲಾ ಶಿಕ್ಷಕರು ವಿದ್ಯಾರ್ಥಿಯ ಹಾಜರಾತಿಯ ಪ್ರಮಾಣ ಕಡಿಮೆ ಇದೆ ಎಂದು ಇತ್ತೀಚೆಗೆ ಪೋಷಕರಿಗೆ ಮಾಹಿತಿ ನೀಡಿ ಪೋಟೋ ತೆಗೆಸಿಕೊಂಡು ಮೊದಲೇ ಮಾಹಿತಿ ನೀಡಿದ್ದೇವೆ ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಶಾಲೆಗೆ ಗೈರುಹಾಜರಿ ಆಗಿಲ್ಲ

ಶಿಕ್ಷಕರಿಗೆ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಅವರಿಗೆ ಬೇಕಾಗಿರುವುದು ಶಾಲೆಯ ಫಲಿತಾಂಶ ಹೆಚ್ಚಳವಷ್ಟೆ. ಅದಕ್ಕಾಗಿ ಶಾಲೆಗೆ ಬರದೇ ಹಲವು ದಿನಗಳ ಕಾಲ ಗೈರಾಗಿರುವಂತಹ ಮಕ್ಕಳಿಗೆ ಕರೆದು ಪರೀಕ್ಷೆಗೆ ಕೂರಿಸುತ್ತಿದ್ದಾರೆ. ನಮ್ಮ ಮಕ್ಕಳೂ ಸಹ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಬೇಕಾದರೆ ಶಾಲೆಯ ಸಿಸಿ ಕ್ಯಾಮೆರಾ ಮತ್ತು ಹಾಜರಾತಿ ಪುಸ್ತಕವನ್ನು ತಾಳೆ ಮಾಡಿ ನೋಡಲಿ ಎಂದು ಶಿಕ್ಷಕರ ವಿರುದ್ದ ಪೋಷಕರು ಕಿಡಿಕಾರಿದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶಾಲೆಯ ಗೇಟಿನ ಮುಂಭಾಗ ಮಕ್ಕಳು ಮತ್ತು ಪೋಷಕರು ಪ್ರತಿಭಟನೆ ನಡೆಸಿ ಪರೀಕ್ಷೆಗೆ ಕೂರಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯ ಮಾಡಿದರೂ ಸಹ ಮುಖ್ಯ ಶಿಕ್ಷಕರು ಇದು ಪರೀಕ್ಷಾ ಮಂಡಳಿಯ ನಿರ್ಧಾರ. ನಿಮ್ಮ ಮಕ್ಕಳು ಶಾಲೆಗೆ ಸರಿಯಾಗಿ ಬರುತ್ತಿಲ್ಲ ಎಂದು ಹಲವು ಬಾರಿ ಮಾಹಿತಿ ನೀಡಿದ್ದೇವೆ. ಹಾಜರಾತಿ ಪ್ರಮಾಣ ಕಡಿಮೆ ಇರುವುದರಿಂದ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಜೂನ್ ತಿಂಗಳಿನಲ್ಲಿ ನಡೆಯುವ ಪರೀಕ್ಷೆ ಬರೆಯಲು ನಿಮ್ಮ ಮಕ್ಕಳಿಗೆ ಅವಕಾಶ ನೀಡುತ್ತೇವೆ ಎಂದು ಹೇಳಿದರು. ಇತ್ತ ಪೊಲೀಸರು ಮಧ್ಯಪ್ರವೇಶ ಮಾಡಿ ಪೋಷಕರನ್ನು ಸಮಾಧಾನಪಡಿಸಿ ಸ್ಥಳ ತೆರವು ಮಾಡಿಸಿದರು.

Share this article