ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ಜಿಲ್ಲೆಯಲ್ಲಿ 161 ಮಂದಿ ಗೈರು

KannadaprabhaNewsNetwork | Published : Mar 22, 2025 2:01 AM

ಸಾರಾಂಶ

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನ ಕೊಡಗು ಜಿಲ್ಲೆಯಲ್ಲಿ 6444 ಮಂದಿಯಲ್ಲಿ 161 ಮಂದಿ ಪರೀಕ್ಷೆಗೆ ಗೈರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನ ಕೊಡಗು ಜಿಲ್ಲೆಯಲ್ಲಿ 6444 ಮಂದಿಯಲ್ಲಿ 161 ಮಂದಿ ಪರೀಕ್ಷೆಗೆ ಗೈರಾಗಿದ್ದಾರೆ.

ಶುಕ್ರವಾರ ಕನ್ನಡ ವಿಷಯದ ಪರೀಕ್ಷೆ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 27 ಪರೀಕ್ಷಾ ಕೇಂದ್ರಗಳಿದ್ದು, ಮಡಿಕೇರಿ ತಾಲೂಕಿನಲ್ಲಿ 8, ಸೋಮವಾರಪೇಟೆ ತಾಲೂಕಿನಲ್ಲಿ 11 ಮತ್ತು ವಿರಾಜಪೇಟೆ ತಾಲೂಕಿನಲ್ಲಿ 8 ಪರೀಕ್ಷಾ ಕೇಂದ್ರಗಳಿವೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಿಂದ ಸುಗಮವಾಗಿ ಮತ್ತು ಸುರಕ್ಷಿತವಾಗಿ ಸಾಗಿಸಲು ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿತ್ತು ಮತ್ತು ಪ್ರತೀ ಮಾರ್ಗಕ್ಕೆ ಒಬ್ಬರಂತೆ 7 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದ್ದು, ಮಾರ್ಗಾಧಿಕಾರಿಗಳ ವಾಹನ ಭದ್ರತೆಗೆ ಒಬ್ಬರು ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು.ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು ಮತ್ತು ಉಪ ಮುಖ್ಯ ಅಧೀಕ್ಷಕರನ್ನು ಹಾಗೂ ಸ್ಥಾನಿಕ ಜಾಗೃತದಳದ ಸಿಬ್ಬಂದಿ ನೇಮಕಮಾಡಲಾಗಿತ್ತು.ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ನಿಷೇಧಿತ ಪ್ರದೇಶವಾಗಿದ್ದು, ಎಲ್ಲ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಸಮಯದಲ್ಲಿ ಮುಚ್ಚಲು ಸೂಚಿಸಲಾಗಿತ್ತು.

ವಿಶೇಷ ಬಸ್ ವ್ಯವಸ್ಥೆ:

ಪೊನ್ನಂಪೇಟೆ ತಾಲೂಕು ತಿತಿಮತಿ ಹತ್ತನೇ ತರಗತಿ ಪರೀಕ್ಷಾ ಕೇಂದ್ರದಿಂದ ಬಾಳೆಲೆ ಪೊನ್ನಪ್ಪಸಂತೆ, ಮಾಯಮುಡಿ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಮುಗಿದೊಡನೆ ತೆರಳಲು ಬಸ್ ವ್ಯವಸ್ಥೆ ಇಲ್ಲದ್ದನ್ನು ಗಮನಿಸಿದ ಜಯಲಕ್ಷ್ಮೀ ಬಸ್ ಮಾಲಿಕರಾದ ಕಾಡೇಮಾಡ ಗೌತಮ್ ಅವರು ಮಕ್ಕಳು ಬೇಗ ಮನೆ ಸೇರಿ ಮುಂದಿನ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿಕೊಳ್ಳುವ ನಿಟ್ಟಿನಲ್ಲಿ ಹತ್ತನೇ ತರಗತಿ ಪರೀಕ್ಷೆ ಮುಗಿದೊಡನೆ ತಿತಿಮತಿಯಿಂದ ಬಾಳೆಲೆಗೆ ವಿಶೇಷ ಬಸ್ ವ್ಯವಸ್ಥೆಯನ್ನು ನೀಡಿ ವರ್ಷಂ ಪ್ರತಿಯಂತೆ ಈ ವರ್ಷವೂ ಸಹಕರಿಸಿದ್ದು, ಬಾಳೆಲೆ ಮತ್ತು ಪೊನ್ನಪ್ಪಸಂತೆ ಭಾಗದ ಕನ್ನಡ ಮಾಧ್ಯಮ ಮಕ್ಕಳಿಗೆ ಅನೂಕೂಲವಾಗಿದೆ.

ಲಾಭಕ್ಕಾಗಿ ಮದುವೆ, ರಾಜಕೀಯ ಪಕ್ಷಗಳು ನಡೆಸುವ ಕಾರ್ಯಕ್ರಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವವರ ಮಧ್ಯೆ ಮಕ್ಕಳ ಭವಿಷ್ಯವನ್ನು ಮುಂದಿಟ್ಟುಕೊಂಡು ಈ ರೀತಿಯ ಸೇವೆ ನೀಡುವ ಬಸ್‌ ಮಾಲೀಕರ ಕಾರ್ಯ ಶ್ಲಾಘನೀಯವೆಂದು ಪೋಷಕರಾದ ಗಿರಿಜನ ಮುಖಂಡ ಕಾಳ ಕಾರ್ಮಾಡು ಮತ್ತಿತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share this article