- ಕರ್ನಾಟಕಕ್ಕೆ ಅನುದಾನ ನೀಡುವಲ್ಲೂ ಮಲತಾಯಿ ಧೋರಣೆ: ಲೋಕಸಭೆ ಅಧಿವೇಶನದಲ್ಲಿ ಮೋದಿ ಸರ್ಕಾರಕ್ಕೆ ತರಾಟೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಲಜೀವನ್ ಮಿಷನ್‌ನಡಿ ಶೇ.80 ಮನೆಗಳಿಗೆ ನಳದ ಮೂಲಕ ನೀರಿನ ಸಂಪರ್ಕ ಇದೆಯೆಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದರಲ್ಲಿ ಕೇವಲ ಶೇ.62ರಷ್ಟು ಮಾತ್ರ ನಳಗಳು ಕಾರ್ಯನಿರ್ವಹಿಸುತ್ತಿವೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರು.ಲೋಕಸಭೆ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಶುಕ್ರವಾರ ಕೇಂದ್ರ ಯೋಜನೆಯಾದ ಜಲಜೀವನ್ ಮಿಷನ್ ಬಗ್ಗೆ ಜಲಶಕ್ತಿ ಸಚಿವಾಲಯ ನೀಡಿದ ಅನುದಾನ ವಿಚಾರವಾಗಿ ಅವರು ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆ ಸಂಪೂರ್ಣ ವಿಫಲವಾಗಿದ್ದು, ದಿನಕ್ಕೆ 55 ಲೀಟರ್ ನೀರಿನ ಗುರಿ ಮಾತ್ರ ಪೂರೈಸುತ್ತಿದೆ ಎಂದರು.
ಜೆಜೆಎಂ ಯೋಜನೆಗೆ 2024-25ನೇ ಸಾಲಿನಲ್ಲಿ ಶೇ.67.7ರಷ್ಟು ಅನುದಾನ ಕಡಿತವಾಗಿದೆ. ಇದು ನಿಧಿಗಳ ಅಳವಡಿಕೆಯಲ್ಲಿನ ವೈಫಲ್ಯ ತೋರುತ್ತಿದೆ. ಅಟಲ್ ಭೂ ಜಲ್ ಯೋಜನೆಯಡಿ 8000 ಜಲಹೀನ ಪಂಚಾಯಿತಿಗಳಲ್ಲಿ ನೀರಿನ ಪರಿಸ್ಥಿತಿ ಸುಧಾರಣೆ ಆಗಿದೆಯೆಂದು ಕೇಂದ್ರ ಹೇಳುತ್ತದೆ. ಆದರೆ, ವಾಸ್ತವವಾಗಿ ಕೇವಲ ಶೇ.37ರಷ್ಟು ಜಲಹೀನ ಪ್ರದೇಶಗಳನ್ನು ಮಾತ್ರ ತಲುಪಲಾಗಿದೆ. ಯೋಜನೆಯಡಿ ಬಜೆಟ್‌ನ ನಿಧಿ ಕೇವಲ ಶೇ.57 ಮಾತ್ರ ಬಳಸಿದೆ. ಜಲಶಕ್ತಿ ನಿಧಿಗಳಿದ್ದರೂ ಅವು ಬಳಸಲಾಗುತ್ತಿಲ್ಲ ಎಂದು ದೂರಿದರು.
ಕೇಂದ್ರವು ತನ್ನದೇ ಬಜೆಟ್‌ನಲ್ಲಿ ಘೋಷಿಸಿದ ಜಲಶಕ್ತಿ ನಿಧಿ ಬಿಡುಗಡೆಗೆ ವಿಫಲವಾಗಿದೆ. ಕರ್ನಾಟಕವು ಕೇಂದ್ರದ ಖಜಾನೆಗೆ ಕೊಡುಗೆಯಾಗಿ ಪ್ರತಿ ₹100 ನೀಡಿದರೂ, ಕೇವಲ ₹13 ಮಾತ್ರ ರಾಜ್ಯವು ಮರಳಿ ಪಡೆಯುತ್ತಿದೆ. ಜಲಜೀವನ್ ಮಿಷನ್‌ನಲ್ಲಿ 34 ರಾಜ್ಯಗಳು, ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕವು 22ನೇ ಸ್ಥಾನದಲ್ಲಿದೆ. ಇದು ಆಡಳಿತ ವೈಫಲ್ಯದಿಂದ ಮಾತ್ರವಲ್ಲ, ಕೇಂದ್ರವು ₹26,119 ಕೋಟಿ ಘೋಷಿಸಿದಾಗಲೂ ಕೇವಲ ₹11,760 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಅದರಲ್ಲೂ ಕೇವಲ ಶೇ.45 ಮಾತ್ರ. ಇದು ಮಲತಾಯಿ ಧೋರಣೆಯಲ್ಲದೇ ಮತ್ತೇನು ಎಂದು ಡಾ.ಪ್ರಭಾ ತರಾಟೆಗೆ ತೆಗೆದುಕೊಂಡರು.
ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಗಳ 2 ಲಕ್ಷ ಹೆಕ್ಟೇರ್‌ನಲ್ಲಿ ಹನಿ ನೀರಾವರಿ, 367 ಸಣ್ಣ ನೀರಾವರಿ ಟ್ಯಾಂಕ್ ಗಳನ್ನು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆ ಅತ್ಯಗತ್ಯ. ಕೇಂದ್ರವು ₹5,300 ಕೋಟಿ ಘೋಷಿಸಿದರೂ, ಕರ್ನಾಟಕ ರಾಜ್ಯದ ನಾವು ಖಾಲಿ ಚೆಂಬು ಮಾತ್ರ ಪಡೆದಿದ್ದೇವೆ. ಕರ್ನಾಟಕ ತನ್ನ ಪಾಲಿನ ₹10,121.75 ಕೋಟಿ ಯೋಜನೆಗೆ ನೀಡಿದೆ ಎಂದು ವಿವರಿಸಿದರು.
- - -
- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ
ಜಲಜೀವನ ಮಿಷನ್ ಯೋಜನೆ ವೈಫಲ್ಯ, ರಾಜ್ಯಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಶುಕ್ರವಾರ ಲೋಕಸಭೆಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು.