ಮಲ್ಲಿಗೆ ನಾಡಲ್ಲಿ ಮೂಲಭೂತ ಸೌಲಭ್ಯ ಕೊರತೆ

KannadaprabhaNewsNetwork |  
Published : May 28, 2025, 12:28 AM IST
ಹೂವಿನಹಡಗಲಿ ಪಟ್ಟಣದ ಹಳೆ ಬಸ್‌ ನಿಲ್ದಾಣ ಬಳಿ ಇರುವ ಶೌಚಾಲಯದ ಮುಂದೆ ಜನ ಸರದಿ ಸಾಲಿನಲ್ಲಿ ನಿಂತಿರುವುದು  | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರುವ ಜನರಿಗೆ ಇಂದಿಗೂ ಮೂಲಭೂತ ಸೌಲಭ್ಯ ಕಲ್ಪಿಸಲು ಪುರಸಭೆಯಿಂದ ಸಾಧ್ಯವಾಗಿಲ್ಲ.

ಹೆಸರಿಗೆ ಮಾತ್ರ ಅಭಿವೃದ್ಧಿ । ಬೀದಿ ದೀಪ, ರಸ್ತೆ ಕಾಮಗಾರಿಗಷ್ಟೆ ಆದ್ಯತೆ । ಸೌಲಭ್ಯ ಮರಿಚೀಕೆ

ಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರುವ ಜನರಿಗೆ ಇಂದಿಗೂ ಮೂಲಭೂತ ಸೌಲಭ್ಯ ಕಲ್ಪಿಸಲು ಪುರಸಭೆಯಿಂದ ಸಾಧ್ಯವಾಗಿಲ್ಲ. ಇಲ್ಲಿನ ಹಳೆ ಬಸ್‌ ನಿಲ್ದಾಣದ ಪಕ್ಕದಲ್ಲಿ ಒಂದು ಶೌಚ ಮತ್ತು ಮೂತ್ರಾಲಯ ಇದೆ. ಹಳ್ಳಿ ಜನ ಜಲಬಾಧೆ ತೀರಿಸಿಕೊಳ್ಳಲು ಬಯಲನ್ನೇ ಅವಲಂಬಿಸುವ ಪರಿಸ್ಥಿತಿ ಇದೆ.

ಈಗಾಗಲೇ ಪಟ್ಟಣದ ವಿವಿಧ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಫುಟ್‌ಪಾತ್‌ ಇತ್ತು. ಅದನ್ನು ತೆರವುಗೊಳಿಸಿ ಹೈಟೆಕ್‌ ಫುಟ್‌ಪಾತ್‌ ನಿರ್ಮಾಣ, ಬೀದಿ ದೀಪ ಮತ್ತು ಸಿಸಿ ಕ್ಯಾಮೆರಾಗಳ ಅಳವಡಿಕೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಇದರಲ್ಲಿ ಜನರಿಗೆ ಅಗತ್ಯವಿರುವ ಶೌಚ ಮತ್ತು ಮೂತ್ರಾಲಯ ಕಾಮಗಾರಿಗಳಿಗೆ ಆದ್ಯತೆಯೇ ನೀಡಿಲ್ಲ. ಹೆಸರಿಗೆ ಮಾತ್ರ ಮಲ್ಲಿಗೆ ನಾಡು ಸಮಗ್ರ ಅಭಿವೃದ್ಧಿ, ಇಂದಿಗೂ ಹಳೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ನಿಲ್ದಾಣ ನಿರ್ಮಾಣಕ್ಕೂ ಆದ್ಯತೆ ನೀಡದ ಹಿನ್ನೆಲೆ ಜನ ಮಳೆ, ಬಿಸಿಲು ಎನ್ನದೇ ರಸ್ತೆ ಬದಿಯೇ ನಿಲ್ಲುವಂತಾಗಿದೆ.

ಡಿಎಂಎಫ್‌ನಿಂದ ₹8 ಕೋಟಿ:

ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಜಿಲ್ಲಾ ಖನಿಜ ನಿಧಿಯಿಂದ ₹8 ಕೋಟಿ ಮಂಜೂರಾಗಿದೆ. ಇದರಲ್ಲಿ 5 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಪಟ್ಟಣದ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಿಂದ ಮದಲಗಟ್ಟ ವೃತ್ತದವರೆಗೂ ವೃತ್ತಗಳ ನಿರ್ಮಾಣ, ಅವಶ್ಯಕತೆಗಳಿಗೆ ಅನುಗುಣವಾಗಿ ಬೀದಿ ದೀಪಗಳ ಹಾಗೂ, ಸಿಸಿ ಕ್ಯಾಮೆರಾ ಅಳವಡಿಕೆ ಅಭಿವೃದ್ಧಿಗಾಗಿ ₹1 ಕೋಟಿ, ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಿಂದ ಎಂ.ಪಿ. ಪ್ರಕಾಶ ನಗರದ ಮುಖ್ಯ ದ್ವಾರದವರೆಗೂ, ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಹಂಪಸಾಗರಕ್ಕೆ ಹೋಗುವ ರಸ್ತೆ ವರೆಗೂ ಬೀದಿ ದೀಪಗಳು, ಸಿಸಿ ಕ್ಯಾಮೆರಾ ಅಳವಡಿಕೆಗಾಗಿ ₹2 ಕೋಟಿ, ಎಸ್‌ಆರ್‌ಎಂಪಿಪಿ ಕಾಲೇಜಿನಿಂದ ಜೆಸ್ಕಾಂ ಕಚೇರಿವರೆಗೂ, ಜೆಸ್ಕಾಂ ಕಚೇರಿಯಿಂದ ಎಪಿಎಂಸಿ ಕಚೇರಿ ವರೆಗೂ, ಎಪಿಎಂಸಿಯಿಂದ ಗಡ್ಡಿ ದುರ್ಗಮ್ಮ ದೇಗುಲದವರೆಗೂ ವೃತ್ತ ನಿರ್ಮಾಣ, ಬೀದಿ ದೀಪಗಳು ಮತ್ತು ಸಿಸಿ ಕ್ಯಾಮೆರಾ ಅಳವಡಿಕೆಗಾಗಿ ₹1.65 ಕೋಟಿ, ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಿಂದ ಹಡಗಲಿ ಮುಖ್ಯ ದ್ವಾರದವರೆಗೂ ರಸ್ತೆ ಅಭಿವೃದ್ಧಿಗಾಗಿ ₹1.70 ಕೋಟಿ, ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ರಸ್ತೆ, ಜೆಸ್ಕಾಂ ಕಚೇರಿಯಿಂದ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದವರೆಗೂ, ಎಪಿಎಂಸಿಯಿಂದ ಗಡ್ಡಿ ದುರ್ಗಮ್ಮ ದೇವಸ್ಥಾನದ ವರೆಗೂ ರಸ್ತೆ ಅಭಿವೃದ್ಧಿಗಾಗಿ ₹1.60 ಕೋಟಿಗಳಲ್ಲಿ ಕಾಮಗಾರಿ ಸೇರಿ ಒಟ್ಟು ₹8 ಕೋಟಿ ಕಾಮಗಾರಿ ನಡೆಯುತ್ತಿದೆ. ಇಷ್ಟೆಲ್ಲ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸುವ ಸಂದರ್ಭ ಶೌಚಾಲಯ, ಮೂತ್ರಾಲಯ ಕಾಮಗಾರಿ ನೆನಪಿಗೆ ಬರಲಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಶೌಚಕ್ಕೆ ಸರದಿ ಸಾಲು:

ಪಟ್ಟಣಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು, ರೈತರು, ಮಹಿಳೆಯರು ಆಗಮಿಸುತ್ತಾರೆ. ಇವರಿಗೆಲ್ಲಾ ಒಂದೇ ಶೌಚಾಲಯ, ಮೂತ್ರಾಲಯವಿದೆ. ಜಲಬಾಧೆ ತೀರಿಸಿಕೊಳ್ಳಲು ಜನ ಗೋಡೆಯ ಮರೆ, ಬೇಲಿ ಸಾಲು ಹುಡುಕುತ್ತಿದ್ದಾರೆ. ಜತೆಗೆ ಇರುವ ಶೌಚಾಲಯ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇದೆ. ಇದು ತೀರಾ ನಾಚಿಗೇಡಿನ ಸಂಗತಿಯಾಗಿದೆ. ಪ್ರತಿ ವರ್ಷ ಪುರಸಭೆ ಕೋಟ್ಯಾಂತ ರು. ಬಜೆಟ್‌ ಮಂಡನೆ ಮಂಡಿಸುತ್ತದೆ. ಯಾವೊಬ್ಬ ಸದಸ್ಯರು ಕನಿಷ್ಠ ಮೂಲಭೂತ ಸೌಲಭ್ಯವಾಗಿರುವ ಶೌಚಾಲಯ, ಮೂತ್ರಾಲಯ ನಿರ್ಮಾಣದ ಗೋಜಿ ಹೋಗಿಲ್ಲ. ಪುರಸಭೆ ಸದಸ್ಯರ ಈ ನಡೆ ಜನಾಕ್ರೋಶಕ್ಕೆ ಕಾರಣವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ