ಕನ್ನಡಪ್ರಭ ವಾರ್ತೆ ಕೋಲಾರ
ಮುಚ್ಚಲ್ಪಟ್ಟಿರುವ ಶಾಲೆಗಳಲ್ಲಿ ಪೀಠೋಪಕರಣಗಳು ತಕ್ಕು ಹಿಡಿಯುತ್ತಿವೆ. ಸೂಕ್ತ ನಿರ್ವಹಣೆ ಇಲ್ಲದೆ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಶಾಲೆಗಳ ಕಾಂಪೌಂಡ್ ಗೇಟ್ ತೆರೆದಿರುವ ಕಾರಣ ಶಾಲೆಯ ಆವರಣಗಳು ಕುಡುಕರ ತಾಣಗಳಾಗುತ್ತಿವೆ.
ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ ತಾಲೂಕುಗಳ ಗಡಿಭಾಗಗಳಲ್ಲಿರುವ ಬಹಳಷ್ಟು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಲ್ಪಟ್ಟಿವೆ. ನಗರ ಮತ್ತು ಪಟ್ಟಣ ಪ್ರದೇಶದ ಆಜುಬಾಜಿನಲ್ಲಿರುವ ಗ್ರಾಮೀಣ ಭಾಗಗಳ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಕ್ಕಳ ಹಾಜರಾತಿ ದಿನೇ ದಿನೇ ಕುಸಿಯುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಪೋಷಕರು ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದರಿಂದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುವಂತಾಗಿದೆ.
ಕಳೆದ ವರ್ಷ ಮುಚ್ಚಲ್ಪಟ್ಟಿರುವ ಶಾಲೆಗಳು ಈ ವರ್ಷದಿಂದ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಮಕ್ಕಳ ಹಾಜರಾತಿಗೆ ಅನುಗುಣವಾಗಿ ಶಾಲೆಗಳನ್ನು ಪ್ರಾರಂಭಿಸುತ್ತೇವೆ. ಇನ್ನೊಂದು ವಾರದಲ್ಲಿ ಎಲ್ಲಾ ಶಿಕ್ಷಣಾಧಿಕಾರಿಗಳ ಸಭೆ ಕರೆದು ಈ ಬಗ್ಗೆ ಮಾಹಿತಿ ಪಡೆಯಲಾಗುವುದು. ಮುಚ್ಚಲ್ಪಟ್ಟಿರುವ ಶಾಲೆಗಳ ಪೀಠೋಪಕರಣಗಳನ್ನು ಬೇರೆ ಶಾಲೆಗಳಿಗೆ ಸಾಗಿಸಲಾಗುವುದು.
...