ಬಸ್ ಸೌಲಭ್ಯ ಇಲ್ಲದೇ ನವಗ್ರಾಮಗಳ ಓದಿಗೆ ಅಡ್ಡಿ

KannadaprabhaNewsNetwork |  
Published : Jun 18, 2026, 02:30 AM IST
ಹೊಳೆಆಲೂರ ಬಸ್ ನಿಲ್ದಾಣ. | Kannada Prabha

ಸಾರಾಂಶ

ಹೊಳೆಆಲೂರಿನಿಂದ ಕೆಲವಷ್ಟು ವಿದ್ಯಾರ್ಥಿಗಳು ರೋಣ, ನರೇಗಲ್, ಗಜೇಂದ್ರಗಡ ಹೋಗುತ್ತಾರೆ. 7.30ಕ್ಕೆ, 10.30ಕ್ಕೆ, ಶಿಕ್ಷಣ ಕೇಂದ್ರಗಳಿಗೆ ಹೋಗಲು, 1 ಗಂಟೆ ಸಂಜೆ 4.30 ಮರಳಿ ಗ್ರಾಮಕ್ಕೆ ಬರಲು ಬೆನಹಾಳ ಗ್ರಾಮದಿಂದ ಬಸ್‌ ವ್ಯವಸ್ಥೆ ಮಾಡಿದರೆ ಸಾಕು.

ಸಂಜೀವಕುಮಾರ ಹಿರೇಮಠ ಹೊಳೆಆಲೂರು: ಹೊಳೆಆಲೂರು ಹಾಗೂ ರೋಣ ಪಟ್ಟಣಕ್ಕೆ ಶಿಕ್ಷಣ ಕಲಿಯಲು ಹೊಳೆಹಡಗಲಿ, ಬಸರಕೋಡ, ಬಿ.ಎಸ್. ಬೇಲೇರಿ ಹಾಗೂ ಹಳೆಯ ಅಮರಗೋಳ ಗ್ರಾಮಗಳ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ನಡೆದು ಇಲ್ಲವೇ ಆಟೋ ಹಿಡಿದು ಹೋಗಬೇಕಿದೆ.

ಹೊಳೆಆಲೂರಿನಿಂದ ನವಗ್ರಾಮಗಳಿಗೆ ಹೋಗುವ ರಸ್ತೆ ಹದಗೆಟ್ಟಿರುವದರಿಂದ 4-5 ವರ್ಷಗಳಿಂದ ಬಸ್ ವ್ಯವಸ್ಥೆ ಇಲ್ಲದಾಗಿದೆ. ಆದರೆ ಬೆನಹಾಳ ಗ್ರಾಮದಿಂದ ಹೊಳೆಹಡಗಲಿ, ಅಮರಗೋಳ, ಬಸರಕೋಡ, ಬಿ.ಎಸ್.ಬೇಲೇರಿ ಗ್ರಾಮಗಳಿಗೆ ಹೋಗಲು ಸುಸಜ್ಜಿತ ರಸ್ತೆ ಇದ್ದು, ಗ್ರಾಮಗಳ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡದೆ ಇರುವುದು ಖೇದಕರ ಸಂಗತಿಯಾಗಿದೆ. ನವಗ್ರಾಮಗಳಿಂದ ಬೆನಹಾಳ ಗ್ರಾಮಕ್ಕೆ ಬಂದು ಇಲ್ಲಿಂದ ರೋಣ ಹಾಗೂ ಹೊಳೆಆಲೂರು ಬಸ್ ಹತ್ತಿ ಹೋಗುವ ಪರಿಸ್ಥಿತಿ ಇದೆ. ಮತ್ತೆ ಸರಿಯಾಗಿ ಸಮಯಕ್ಕೆ ಬಸ್ ಸಿಗದೆ ಪರದಾಡಿದ ಘಟನೆ ಕೂಡಾ ಸಾಕಷ್ಟಾಗಿವೆ.

ಪದವಿ ಕಾಲೇಜು ಮುಂಜಾನೆ ಪ್ರಾರಂಭವಾಗುವುದರಿಂದ 7.30ರಿಂದ 8 ಗಂಟೆಗೆ, ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜುಗಳು 10 ಗಂಟೆಯಿಂದ ಪ್ರಾರಂಭವಾಗುತ್ತವೆ. ಮತ್ತೆ ಮಧ್ಯಾಹ್ನ 1ರ ಸುಮಾರಿಗೆ, ಸಂಜೆ 4.30ರ ಸುಮಾರಿಗೆ ಒಂದು ಬಸ್ ಬಿಟ್ಟರೆ ನಮ್ಮ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ. ಆಟೋ ಚಾಲಕರು ತಮಗೆ ಆಗುವಷ್ಟು ಪ್ರಯಾಣಿಕರು ಬಂದ ಮೇಲೆ ಹೋಗುತ್ತಾರೆ. ಅವರಿಗೆ ವಿದ್ಯಾರ್ಥಿಗಳ ಸರಿಯಾದ ಸಮಯ ಅರ್ಥವಾಗುವುದಿಲ್ಲ. ಆದ್ದರಿಂದ ಹಲವಾರು ವಿದ್ಯಾರ್ಥಿಗಳು ಇಲ್ಲಿಂದ ನಡೆದುಕೊಂಡು ಹೋಗುತ್ತಾರೆ. ಸ್ವಲ್ಪ ವ್ಯತ್ಯಾಸವಾದರೆ ಶಿಕ್ಷಣ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲ್ಲ ಎಂದು ವಿದ್ಯಾರ್ಥಿಗಳ ಪಾಲಕರು ಹೇಳುತ್ತಾರೆ.

ಇಲ್ಲಿ ಮೊದಲು ರಸ್ತೆ ಸರಿಯಿದ್ದಾಗ ನರಗುಂದದಿಂದ ಬರುವ ವಸತಿ ಬಸ್ ಬಿ.ಎಸ್. ಬೇಲೇರಿ ಗ್ರಾಮದಲ್ಲಿ ತಂಗಿ ಮುಂಜಾನೆ ಹೊಳೆಆಲೂರು ಮಾರ್ಗವಾಗಿ ನರಗುಂದಕ್ಕೆ ಹೋಗುತ್ತಿತ್ತು. 10 ಗಂಟೆಗೆ ರೋಣದಿಂದ ಹೊಳೆಆಲೂರು ಮಾರ್ಗವಾಗಿ ನವಗ್ರಾಮಗಳಿಗೆ ಹೋಗಿ ನೈನಾಪುರದಿಂದ ರೋಣ ಸೇರುತ್ತಿತ್ತು. ಸಂಜೆ 4.30ರ ವೇಳೆಗೂ ಸಾರಿಗೆ ಸೌಲಭ್ಯ ಸಿಗುತ್ತಿತ್ತು. ಆದರೆ ಹೊಳೆಆಲೂರಿಂದ ಅಮರಗೋಳ ಗ್ರಾಮದವರೆಗೂ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಈಗ ಸಮಸ್ಯೆಯಾಗಿದೆ. ಈಗ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೂ ಬಸ್ ಪಾಸ್ ಫ್ರೀ ಮಾಡಿರುವುದರಿಂದ ಸಮಯಕ್ಕೆ ಸರಿಯಾಗಿ ಬಸ್‌ ಬಿಟ್ಟರೆ ಇಲ್ಲಿಯ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

ಪ್ರಾಮಾಣಿಕ ಪ್ರಯತ್ನ: ನಾನು ಈ ಸಂಬಂಧ ಮೊದಲು ಪ್ರಸ್ತಾಸಿದ್ದೇನೆ. ಮತ್ತೆ ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೆ ಬಸ್ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೊಳೆಆಲೂರು ಸಾರಿಗೆ ಕಂಟ್ರೋಲರ್ ಎಸ್.ಕೆ. ಮೆಣಸಿನಕಾಯಿ ತಿಳಿಸಿದರು.ಅರ್ಜಿ ನೀಡಬೇಕು: ಹೊಸ ರಸ್ತೆಗೆ ಬಸ್ ಬಿಡುವುದರಿಂದ ನಮಗೆ ಅಲ್ಲಿಯ ಗ್ರಾಮಸ್ಥರಿಂದ ಹಾಗೂ ಗ್ರಾಮ ಪಂಚಾಯಿತಿಯಿಂದ ಅರ್ಜಿ ಕೊಡಬೇಕಾಗುತ್ತದೆ. ಕೊಟ್ಟ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತಂದು ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ರೋಣದ ಡಿಪೋ ಮ್ಯಾನೇಜರ್ ಎಂ.ಎಂ. ಎಕ್ಸೆಂಬಿ ತಿಳಿಸಿದರು.

ಬಸ್‌ ವ್ಯವಸ್ಥೆ: ಹೊಳೆಆಲೂರಿನಿಂದ ಕೆಲವಷ್ಟು ವಿದ್ಯಾರ್ಥಿಗಳು ರೋಣ, ನರೇಗಲ್, ಗಜೇಂದ್ರಗಡ ಹೋಗುತ್ತಾರೆ. 7.30ಕ್ಕೆ, 10.30ಕ್ಕೆ, ಶಿಕ್ಷಣ ಕೇಂದ್ರಗಳಿಗೆ ಹೋಗಲು, 1 ಗಂಟೆ ಸಂಜೆ 4.30 ಮರಳಿ ಗ್ರಾಮಕ್ಕೆ ಬರಲು ಬೆನಹಾಳ ಗ್ರಾಮದಿಂದ ಬಸ್‌ ವ್ಯವಸ್ಥೆ ಮಾಡಿದರೆ ಸಾಕು. ಎಂದು ನರೇಗಲ್ ಅನ್ನದಾನೇಶ್ವರ ಕಾಲೇಜು ವಿದ್ಯಾರ್ಥಿ ಪ್ರಶಾಂತ ಹಂಜಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟೇಶ್ವರ: ‘ಸೇವಾ ಸಂಕಲ್ಪ’ ಶಿಕ್ಷಣಕ್ಕೆ 93.64 ಲಕ್ಷ ರು. ನೆರವು ವಿತರಣೆ
ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ ಸಾಮಗ್ರಿ ವಿತರಣೆ