ಸರ್ಕಾರಿ ಪಿಯು ಕಾಲೇಜಿನ ೫ ಕೊಠಡಿ, ವಿವಿಐಪಿ ಐಬಿ ಉದ್ಘಾಟಿಸಿದ ಮಂಕಾಳ ವೈದ್ಯ
ಯಾವುದೇ ಕೊರತೆಗಿಂತ ಶಿಕ್ಷಣದ ಕೊರತೆ ದೊಡ್ಡದು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಮಕ್ಕಳಿಗೆ ನೀಡುವ ಶಿಕ್ಷಣವೇ ಪಾಲಕರು ನೀಡಬಹುದಾದ ದೊಡ್ಡ ಆಸ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ನೂತನ ನಿರ್ಮಿತ ಕಾಮಗಾರಿಗಳಾದ ಬೊಗರಿಬೈಲ್ ಸೇತುವೆ, ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನ ೫ ಕೊಠಡಿಗಳು, ನೆಲ್ಲಿಕೇರಿ ಕೆಪಿಎಸ್ ಪ್ರಾಥಮಿಕ ವಿಭಾಗದ ನೂತನ ಕಟ್ಟಡ ಹಾಗೂ ವಿವಿಐಪಿ ಐಬಿಯನ್ನು ಮಂಗಳವಾರ ಉದ್ಘಾಟಿಸಿದರು.ಶಿಕ್ಷಣದ ಜತೆ ಸಂಸ್ಕಾರವೂ ಅಗತ್ಯ. ನೆಲ್ಲಿಕೇರಿ ಕೆಪಿಎಸ್‌ನಲ್ಲಿ ಅತಿಹೆಚ್ಚು ಮಕ್ಕಳು ಇರುವುದರಿಂದ ಹೆಚ್ಚಿನ ಶೌಚಾಲಯ, ಬಾವಿ, ಪಂಪ್ ಸೆಟ್, ಉತ್ತಮ ಕುಡಿಯುವ ನೀರು, ಇಂಟರ್ ಲಾಕ್ ಅಳವಡಿಕೆಗೆ ಪಾಲಕರು ನೀಡಿದ ಮನವಿಗೆ ನಾನು ಮತ್ತು ಶಾಸಕ ದಿನಕರ ಶೆಟ್ಟಿ ಸೇರಿ ಎಲ್ಲಾ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತೇವೆ ಎಂದರು.
ಪ್ರಾಚಾರ್ಯ ಸತೀಶ ನಾಯ್ಕ ಸ್ವಾಗತಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಿತ್ಯಾನಂದ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ, ತಾಪಂ ಇಒ ರಾಜೇಂದ್ರ ಎಲ್. ಭಟ್, ಡಿಡಿಪಿಐ ಲಲಿತಾ ಎಂ. ನಾಯ್ಕ, ಡಯಟ್ ಪ್ರಾಚಾರ್ಯ ಎನ್.ಆರ್. ಹೆಗಡೆ, ಬಿಇಒ ಉದಯ ನಾಯ್ಕ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಶಾಂತಿ ಅಡಿಗುಂಡಿ, ಪ್ರೌಢ ವಿಭಾಗದ ಮುಖ್ಯಶಿಕ್ಷಕ ಟಿ.ಎನ್. ಗೌಡ, ಜಿಪಂ ಎಇಇ ಕಲ್ಪನಾ ವಾಗ್ಮೋರೆ ಇತರರು ಇದ್ದರು.