ಬಾದಾಮಿ ತಾಲೂಕಾಸ್ಪತ್ರೆಯಲ್ಲಿ ಸಲಕರಣೆಗಳ ಕೊರತೆ !

KannadaprabhaNewsNetwork |  
Published : Jun 17, 2025, 12:35 AM IST
ಡಯಾಸಿಲಿಸ್ ಕೊಠಡಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಯುಪಿಎಸ್ ಕನೆಕ್ಷನ್ ಇಲ್ಲದೇ ರೋಗಿ ನರಳಾಡುತ್ತಿರುವುದು.  | Kannada Prabha

ಸಾರಾಂಶ

ಬಾದಾಮಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯ ಬರುವ ರೋಗಿಗಳಿಗೆ ಪರೀಕ್ಷೆ ಮಾಡಲು ಅಗತ್ಯ ಯಂತ್ರೋಪಕರಣಗಳು ಇಲ್ಲದೇ ಇರುವ ಕಾರಣ ಖಾಸಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರಲು ಶಿಫಾರಸು ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇದರಿಂದ ರೋಗಿಗಳು ಬಾದಾಮಿಯಿಂದ ಬಾಗಲಕೋಟೆ, ಬಾಗಲಕೋಟೆಯಿಂದ ಬಾದಾಮಿಗೆ ಅಲೆದಾಡುವಂತಾಗಿದೆ.

ಶಂಕರ ಕುದರಿಮನಿ

ಕನ್ನಡಪ್ರಭ ವಾರ್ತೆ ಬಾದಾಮಿ

ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯ ಬರುವ ರೋಗಿಗಳಿಗೆ ಪರೀಕ್ಷೆ ಮಾಡಲು ಅಗತ್ಯ ಯಂತ್ರೋಪಕರಣಗಳು ಇಲ್ಲದೇ ಇರುವ ಕಾರಣ ಖಾಸಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರಲು ಶಿಫಾರಸು ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇದರಿಂದ ರೋಗಿಗಳು ಬಾದಾಮಿಯಿಂದ ಬಾಗಲಕೋಟೆ, ಬಾಗಲಕೋಟೆಯಿಂದ ಬಾದಾಮಿಗೆ ಅಲೆದಾಡುವಂತಾಗಿದೆ.

ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದೇವೆ ಎಂದು ಹೇಳುವ ಸರ್ಕಾರ ಆಸ್ಪತ್ರೆಗೆ ಬರುವ ರೋಗಿಗಳಿಗೆ ನೇತ್ರ ತಪಾಸಣೆ, ಕಿವಿ, ಮೂಗು, ಗಂಟಲು ಪರೀಕ್ಷೆಗೆ ಬೆರಾ, ಆಡಿಯೋ ಮೀಟರ್ ಮುಂತಾದ ಸಲಕರಣೆಗಳು ಇಲ್ಲದೆ ಜಿಲ್ಲಾಸ್ಪತ್ರೆಗೆ ಅಥವಾ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಸಿಟಿ ಸ್ಕ್ಯಾನಿಂಗ್ ಮಷಿನ್ ಇದೆಯಾದರೂ ವೈದ್ಯರಿಲ್ಲ. ತಾಲೂಕಿನ ಜನತೆ ಆರೋಗ್ಯಕ್ಕೆ ಸಂಬಂಧಿಸಿದ ರೋಗಗಳ ಚಿಕಿತ್ಸೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಅಗತ್ಯವಿರುವ ಸಲಕರಣೆ, ಯಂತ್ರೋಪಕರಣ ಪೂರೈಕೆ ಮಾಡಿ ಚಿಕಿತ್ಸೆಗೆ ನೆರವಾಗಬೇಕು ಎಂದು ರೋಗಿಗಳು ಆಗ್ರಹಿಸುತ್ತಲೇ ಇದ್ದಾರೆ.

ಯುಡಿಐಡಿ ಕಾರ್ಡ್‌ ಮಾಡಿಸಲು ಪರದಾಟ:

ತಾಲೂಕಿನ ವಿವಿಧ ಗ್ರಾಮ, ನಗರಗಳಿಂದ 21 ವಿಧದ ವಿಕಲಚೇತನರು ಪ್ರತಿ ಮಂಗಳವಾರ ಅಥವಾ ಮೂರನೇ ಮಂಗಳವಾರ ವಿಕಲಚೇತನರ ಗುರುತಿನ ಚೀಟಿ(ಯುಡಿಐಡಿ) ಮಾಡಿಸಲು ತಾಲೂಕಾಸ್ಪತ್ರೆಗೆ ಬಂದಾಗ ನೇತ್ರ, ಇಎನ್‌ಟಿ ವೈದ್ಯರು ಹೆಚ್ಚಿನ ಪರೀಕ್ಷೆ ಮಾಡಿಸಿಕೊಂಡು ಬರಲು ಜಿಲ್ಲಾಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿ ಕಳುಹಿಸುತ್ತಾರೆ. ಇದರಿಂದ ತಾಲೂಕಿನಿಂದ ಜಿಲ್ಲೆಗೆ, ಜಿಲ್ಲೆಯಿಂದ ತಾಲೂಕಿಗೆ ಅಲೆದಾಡುವ ಸ್ಥಿತಿ ಇದೆ. ಸರಿಯಾದ ಮಾಹಿತಿಯನ್ನೂ ನೀಡುವುದಿಲ್ಲ. ನೇತ್ರ ತಪಾಸಣೆ ಮಾಡುವ ಯಂತ್ರೋಪಕರಣಗಳು ಇಲ್ಲ. ಆಡಿಯೋಮೀಟರ್, ಬೆರಾ ಪರೀಕ್ಷೆ ಮಾಡಲು ಸಲಕರಣೆಗಳು ಇಲ್ಲ. ಇದರಿಂದ ವಿಕಲಚೇತನರು ಯುಡಿಐಡಿ ಕಾರ್ಡ್‌ ಮಾಡಿಸಲು ಅಲೆದಾಡಬೇಕಾಗಿದೆ. ಅಗತ್ಯ ನೇತ್ರ, ಇಎನ್‌ಟಿ ಯಂತ್ರೋಪಕರಣ ಹಾಗೂ ಆಡಿಯೋಲಾಜಿಸ್ಟ್, ಬೆರಾ (ಕಿವಿ, ಮೂಗು, ಗಂಟಲು ಚೆಕ್ ಮಾಡುವುದು) ಪರೀಕ್ಷೆ ಮಾಡುವ ಹಾಗೂ ಬುದ್ಧಿಮಾಂದ್ಯ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕಿದೆ.

ಡಯಾಸಿಲಿಸ್ ಕೊಠಡಿಗೆ ಯುಪಿಎಸ್ ಕನೆಕ್ಷನ್ ಇಲ್ಲ:

ಆಸ್ಪತ್ರೆಗೆ ಬರುವ ಡಯಾಸಿಲಿಸ್ ರೋಗಿಗಳು ತಪಾಸಣೆಗೆ ಬಂದಾಗ ವಿದ್ಯುತ್ ಸಂಪರ್ಕ ಕಡಿತಗೊಂಡರೆ ರೋಗಿಗಳು ಪರದಾಡುವಂತಾಗಿದೆ. ಡಯಾಲಿಸಿಸ್ ಯಂತ್ರದ ಕೊಠಡಿಗೆ ಯುಪಿಎಸ್ ಸಂಪರ್ಕ ಇಲ್ಲದ್ದರಿಂದ ಎರಡು, ಮೂರು ಗಂಟೆ ಕಾಯ್ದು ಕರೆಂಟ್ ಸಂಪರ್ಕ ಬಂದ ನಂತರ ಡಯಾಸಿಲಿಸ್ ಪರೀಕ್ಷೆ ಮಾಡಿಸಿಕೊಂಡು ಹೋಗುವುದು ಅನಿವಾರ್ಯವಾಗಿದೆ.

ಶಾಸಕರು, ಡಿಎಚ್‌ಒ ಭೇಟಿ:

ಇತ್ತೀಚೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಆರೋಗ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟು ಸುಧಾರಣೆಗೆ ಸಲಹೆ ನೀಡಿದ್ದರು. ಇದರ ನಂತರ ಡಿಎಚ್‌ಒ ಮಂಜುನಾಥ ಡಿ.ಎನ್. ಸಹಿತ ಆಸ್ಪತ್ರೆಗೆ ಭೇಟಿ ನೀಡಿ ಉತ್ತಮ ಆರೋಗ್ಯ ಸೇವೆಗೆ ಅಗತ್ಯ ಸಲಹೆ, ಸೂಚನೆ ನೀಡಿದ್ದಾರೆ.

ಒಟ್ಟಾರೆಯಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಬೇಕಾಗುವ ಅಗತ್ಯ ಮಷಿನ್‌, ವೈದ್ಯರು, ಸಿಬ್ಬಂದಿಯನ್ನು ನೇಮಕ ಮಾಡಿ ಉತ್ತಮ ಆರೋಗ್ಯ ಸೇವೆ ಕೊಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ನೇತ್ರ ಪರೀಕ್ಷೆ ಮಾಡಲು ಅಟೋ ರಿಫ್ಲೆಕ್ಷನ್ ಟೆಸ್ಟ್, ಫೀಲ್ಡ್ ಟೆಸ್ಟ್ ಮಾಡಲು ನಮ್ಮ ಬಾದಾಮಿ ತಾಲೂಕು ಆಸ್ಪತ್ರೆಯಲ್ಲಿ ಮಷಿನ್‌ಗಳು ಇಲ್ಲ. ಬಾಗಲಕೋಟೆಯ ನವನಗರದ ಶ್ರೀ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜು(ಕುಮಾರೇಶ್ವರ ಆಸ್ಪತ್ರೆ)ಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬಂದ ನಂತರ ಚೆಕ್ ಮಾಡಿ ನೋಡುತ್ತೇನೆ.

-ಡಾ.ಸವಿತಾ ಕಡೆಮನಿ, ನೇತ್ರ ತಜ್ಞರು ತಾಲೂಕಾಸ್ಪತ್ರೆ ಬಾದಾಮಿ

ಬಾದಾಮಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಬೇಕಾಗುವ ಅಗತ್ಯ ಯಂತ್ರೋಪಕರಣ, ಅಗತ್ಯ ಸಲಕರಣೆಗಳನ್ನು ಒದಗಿಸಲು ಈಚೆಗೆ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರಿಗೆ ಮನವಿ ಸಲ್ಲಿಸಲಾಗಿದೆ. ಬರುವ ದಿನಗಳಲ್ಲಿ ಯಂತ್ರೋಪಕರಣಗಳನ್ನು ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ.

-ಭೀಮಸೇನ ಚಿಮ್ಮನಕಟ್ಟಿ, ಶಾಸಕರು ಬಾದಾಮಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ